ಮೈಸೂರು: ಭಾರತೀಯ ಸಂಸ್ಕೃತಿಯು ಶ್ರೀಮಂತ ಪರಂಪರೆ ಹೊಂದಿದೆಯಲ್ಲದೆ, ಪರಿಸರ ಮತ್ತು ವನ್ಯಜೀವಿ ರಕ್ಷಣೆ ಬಗ್ಗೆಯೂ ಕಾಳಜಿ ವಹಿಸುತ್ತದೆ ಎಂದು ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಲತಾಮಣಿ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಹಯೋಗದೊಂದಿಗೆ ವಿದ್ಯಾವರ್ಧಕ ಕಾನೂನು ಕಾಲೇಜು ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಿಟಿಷರ ಕಾಲದಿಂದ ಇಲ್ಲಿಯವರೆಗೆ, ಭಾರತ ಸರ್ಕಾರವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಹಲವಾರು ಪರಿಸರ ಕಾನೂನು ಜಾರಿಗೆ ತಂದಿದೆ. ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮತ್ತು ಅರಣ್ಯೀಕರಣವನ್ನು ತಪ್ಪಿಸಲು ಈ ಕಾನೂನುಗಳು ಮೈಲಿಗಲ್ಲುಗಳಾಗಿವೆ ಎಂದರು.
ಭಾರತೀಯ ಅರಣ್ಯ ಕಾಯ್ದೆ 1927, ಅರಣ್ಯ (ಸಂರಕ್ಷಣಾ) ಕಾಯ್ದೆ 1980, ಪರಿಸರ ಸಂರಕ್ಷಣಾ ಕಾಯ್ದೆ 1986, ನೀರು (ತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ 1981, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಜೈವಿಕ ವೈವಿಧ್ಯತೆ ಕಾಯ್ದೆ 2002, ಈ ನಿಟ್ಟಿನಲ್ಲಿ ಪ್ರಮುಖ ಕಾನೂನುಗಳಾಗಿವೆ ಎಂದರು.
ವಾಯುಮಾಲಿನ್ಯ ಹೆಚ್ಚುತ್ತಿರುವ ಕಾರಣ 1970ರ ದಶಕದಿಂದಲೂ ಜನರು ಪರಿಸರದ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡ್ರೋನ್ ಮತ್ತು ವಿಮಾನಗಳಂತಹ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು, ನಾವು ಬೀಜದ ಚೆಂಡುಗಳನ್ನು ದುರ್ಗಮ ಬೆಟ್ಟಗಳು ಮತ್ತು ಪರ್ವತಗಳಿಗೆ ತಲುಪಬಹುದು. ಉತ್ತಮ ಅರಣ್ಯೀಕರಣವನ್ನು ಸಾಧ್ಯವಾಗಿಸಿದೆ ಎಂದು ಹೇಳಿದರು.
ಸರ್ಕಾರವು ಮೀಸಲು ಅರಣ್ಯ, ವನ್ಯಜೀವಿ ಅಭಯಾರಣ್ಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳಂತಹ ಮೇಲ್ವಿಚಾರಣಾ ಸಂಸ್ಥೆಗಳನ್ನು ಘೋಷಿಸುವ ಮೂಲಕ ಪರಿಸರವನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಆದರೆ, ದೇಶದ ಜನರು ನೈಸರ್ಗಿಕ ಪರಿಸರವನ್ನು ರಕ್ಷಿಸಲು ಸ್ವಯಂ ಪ್ರೇರಣೆಯಿಂದ ಕೈಜೋಡಿಸಬೇಕು ಎಂದು ತಿಳಿಸಿದರು.
ಪ್ರಾಂಶುಪಾಲೆ ಡಾ.ಪಿ.ದೀಪು, ಯುವ ರೆಡ್‌ಕ್ರಾಸ್‌ನ ಸಂಯೋಜಕ ಮೋಹನ್ ಕುಮಾರ್, ಸಹಾಯಕ ಪ್ರಾಧ್ಯಾಪಕ ದೇವಾನಂದ್ ಇನ್ನಿತರರಿದ್ದರು.