ಜಿಲ್ಲೆ

ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಿ

ಬೀದರ್: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್ ಹೇಳಿದರು.
ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಪರಿಸರಕ್ಕಾಗಿ ಮರ, ಗಿಡಗಳನ್ನು ಬೆಳೆಸಬೇಕು. ಪರಿಸರ ಸ್ನೇಹಿಯಾಗಿ ಬದುಕು ಸಾಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಜೀವರಾಶಿಗಳಿಗೆ ನಿಸರ್ಗವೇ ಆಧಾರ. ಹೀಗಾಗಿ ಪರಿಸರದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ವಿಜ್ಞಾನ ಶಿಕ್ಷಕ ಬಳವಂತ ರಾಠೋಡ್ ನುಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಸಲೀಂಖಾನ್, ವಿಜ್ಞಾನ ಶಿಕ್ಷಕ ರಮೇಶ ಮಾತನಾಡಿದರು. ಶಿಕ್ಷಕರಾದ ಸುದರ್ಶನ್ ಬಾಳೂರಕರ್, ಮಾರುತಿ, ರಜನಿ, ಸುರೇಖಾ ಇದ್ದರು.
ಶಿಕ್ಷಕ ಪ್ರಕಾಶ ಪಾಟೀಲ ನಿರೂಪಿಸಿದರು. ಮಹಮ್ಮದ್ ಯಾಸಿನ್ ಸ್ವಾಗತಿಸಿದರು. ಹೇಮಲತಾ ವಂದಿಸಿದರು.