ಜಿಲ್ಲೆ

ಪರಿಸರ ಸಂರಕ್ಷಣೆಗೆ ಜಾಗೃತಿ ರ‍್ಯಾಲಿ

ನಿಪ್ಪಾಣಿ: ಸ್ಥಳೀಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ೭೮ನೇ ಜನ್ಮದಿನ ಅಂಗವಾಗಿ ವಿವಿಧ ಕಾರ್ಯಕ್ರಮ ಜರುಗಿದವು.

ಕೆಎಲ್‌ಇ ಸಂಸ್ಥೆ ನಿರ್ದೇಶಕ ಪ್ರವೀಣ ಬಾಗೇವಾಡಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಶಸ್ತ್ರ ಪಡೆಗಳಲ್ಲಿ ಪಾಲ್ಗೊಳ್ಳಬೇಕೆನ್ನುವ ಆಕಾಂಕ್ಷಿಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಜಿಐಬಿ ಡಿಫೆನ್ಸ್ ಅಕಾಡೆಮಿಗೆ ಚಾಲನೆ ನೀಡಲಾಯಿತು.

ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದಡಿ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಎಲ್ಲ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ೫೦,೦೦೦ಕ್ಕೂ ಅಧಿಕ ಪೇಪರ್ ಪಾಕೆಟ್ ತಯಾರಿಸಿದರು. ಬೃಹತ್ ರ‍್ಯಾಲಿಯಲ್ಲಿ ೨,೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಗರದ ವಿವಿಧ ಅಂಗಡಿಗಳಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಪೇಪರ್ ಪಾಕೆಟ್ ವಿತರಿಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ಬಾಗೇವಾಡಿ ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ ಮತ್ತು ರೇಂಜರ್ ಘಟಕಗಳು ಸಂಗ್ರಹಿಸಿದ ೧೫,೦೦೦ ರೂ.ಗಳಲ್ಲಿ ಸ್ಥಳೀಯ ನಿತೀನಕುಮಾರ ಕದಮ ಕಿವುಡ ಮತ್ತು ಮೂಗ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಬ್ಲಾಂಕೆಟ್ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಿ ಶಿಕ್ಷಕಿಯರಾದ ಪಂಕಜ ಕದಮ, ದೀಪಾಲಿ ಮಾನೆ, ಜ್ಯೋತಿ ಮೆಂಡಗುಡಲೆ, ಮನಿಷಾ ಚೆಂಡಕೆ ಸಮ್ಮುಖದಲ್ಲಿ ಮಕ್ಕಳಿಗೆ ವಿತರಿಸಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಮಹೇಶ ಬಾಗೇವಾಡಿ, ಸದಸ್ಯರಾದ ಡಾ. ಶಂಕರಗೌಡ ಪಾಟೀಲ, ಎಂ.ಆರ್. ಪಾಟೀಲ, ರವೀಂದ್ರ ಶೆಟ್ಟಿ, ಮಲ್ಲಿಕಾರ್ಜುನ ಗಡಕರಿ, ನಿವೃತ್ತ ಪ್ರಾಚಾರ್ಯ ಡಾ. ಎಂ.ಬಿ. ಕೋಥಳೆ, ಪ್ರಾಚಾರ್ಯರಾದ ಡಾ. ಎಂ.ಎಂ. ಹುರಳಿ, ಹೇಮಾ ಚಿಕ್ಕಮಠ ಹಾಗೂ ಶಂಕರಮೂರ್ತಿ ಕೆ.ಎನ್., ಡಾ. ಎಸ್.ಎಂ. ರಾಯಮಾನೆ, ಸುಧಿರ ಕೋಠಿವಾಲೆ, ಡಾ. ಸುನೀತಾ ಹುನ್ನರಗಿ, ಸಿದ್ದು ಉದಗಟ್ಟಿ, ಡಾ. ಬಸವರಾಜ ಜನಗೌಡ, ಶಶಿಧರ ಕುಂಬಾರ, ನಾಗರಾಜ ಬೆಳಗಾಂವಕರ, ಚಂದ್ರಪ್ರಕಾಶ ಸನದಿ ಇತರರು ಇದ್ದರು.