ಮುರಗುಂಡಿ: ಶಾಲಾ ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಬಗ್ಗೆ ಜಾಗೃತಿ ಮೂಡಿಸಿದಾಗ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಮುಖಂಡ ಕುಮಾರಗೌಡ ಪಾಟೀಲ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ ವನಮಹೋತ್ಸವಕ್ಕೆ ಚಾಲನೆ ನೀಡಿ, ಪ್ರತಿ ವಿದ್ಯಾರ್ಥಿ ಸಸಿ ನೆಡುವ ಯೋಜನೆ ಹಮ್ಮಿಕೊಂಡಿರುವುದು ಅಭಿನಂದನಾರ್ಹ. ಶಾಲಾ ದಿನಗಳಿಂದಲೇ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಪ್ರೀತಿ ಹುಟ್ಟುವಂತೆ ಮಾಡಬೇಕು. ಆಗ ಗಿಡ-ಮರ ಉಳಿಯಲು ಸಾಧ್ಯ. ವಿದ್ಯಾರ್ಥಿಗಳು ನೆಟ್ಟ ಸಸಿ ಪೋಷಣೆಯಾಗುವಂತೆ ನೋಡಿಕೊಳ್ಳಬೇಕು. ಶಿಕ್ಷಕರು ಮೇಲ್ವಿಚಾರಣೆ ನಡೆಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮಕ್ಬುಲ್ ನದಾಫ್ ಮಾತನಾಡಿ, ವಿದ್ಯಾರ್ಥಿಗಳು ದತ್ತು ಪಡೆದ ಸಸಿ ಸಂರಕ್ಷಿತವಾದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು. ಮುಖ್ಯಶಿಕ್ಷಕ ಜಿ.ಎಂ.ಅತ್ತಾರ ಮಾತನಾಡಿ, ಶಾಲೆಯಲ್ಲಿ ನುಗ್ಗೆ, ಪೇರು, ಬದಾಮ, ಸಪೋಟ ಸೇರಿ 300ಕ್ಕೂ ಹೆಚ್ಚು ಸಸಿ ನೆಡಲಾಗುತ್ತಿದೆ ಎಂದರು.
ಮುತ್ತಪ್ಪ ಮಗಾಡಿ, ಸುರೇಶ ನಿಂಗನೂರ, ಸಿದಗೌಡ ಕುಸನಾಳೆ, ರವಿ ಶೇಷಗೋಳ, ಸಂಜು ಸನದಿ, ಬಾಳು ಕನಕರೆಡ್ಡಿ, ನಿಂಗಪ್ಪ ಮಗಾಡಿ ಇತರರಿದ್ದರು.