ಉಗರಗೋಳ: ಕಲಿಯುಗದಲ್ಲಿ ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡ, ಮರಗಳನ್ನು ಕಡಿದು ವಾತಾವರಣ ಕಲುಷಿತಗೊಳಿಸುತ್ತಿದ್ದು, ಬರಗಾಲದ ಛಾಯೆ ಮೂಡುತ್ತಿದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು ಎಂದು ವಿಜಯಪುರ ಜಿಲ್ಲೆಯ ಗರಮಗುಂಡಿಗಿಯ ವರಹಳ್ಳಿರಾಯರ ವರಲಿಂಗೇಶ್ವರ ಸ್ವಾಮೀಜಿ ಕರೆ ನೀಡಿದರು.
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದ ಸುತ್ತಲಿನ ಪರಿಸರದಲ್ಲಿ 600 ಸಸಿ ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಪರಿಸರದ ಕಾಳಜಿ ಇಲ್ಲದ್ದರಿಂದ ಭೂ ತಾಯಿಯ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಪರಿಸರ ನಾಶ ಹೆಚ್ಚಾದರೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ. ಮನೆ, ಹೊಲ ಗದ್ದೆ, ಶಾಲೆ, ಕಾಲೇಜು ತೋಟಗಳಲ್ಲಿ ಗಿಡಗಳನ್ನು ನೆಡುವಂತೆ ಕೋರಿದರು.
ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ಇಂದಿನ ದಿನಗಳಲ್ಲಿ ನಗರೀಕರಣದ ಪ್ರಭಾವದಿಂದ ಪರಿಸರ ನಾಶವಾಗುತ್ತಿದೆ. ವಿದ್ಯಾರ್ಥಿಗಳು ರೈತರು, ನಾಗರಿಕರು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಎಎಸ್‌ಐ ಎಸ್.ಆರ್.ಗಿರಿಯಾಲ ಮಾತನಾಡಿದರು.
ದೇವಸ್ಥಾನ ಅಭಿಯಂತ ಎಂ.ವಿ.ಮೂಳ್ಳೂರ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಚೋಳಿನ್, ಅರವೀಂದ್ರ ಮಳಗೆ, ಆರ್.ಎಚ್.ಸವದತ್ತಿ, ಹೋಂ ಗಾರ್ಡ್ ಪಿಎಸ್‌ಐ ಕಿತ್ತೂರ, ಶೇಖಪ್ಪ ಚಿಮ್ಮಲಗಿ, ಕೃಷ್ಣಪ್ಪ ಸ್ಮಣಗಾರ, ಹನುಮಂತ ಕೋಲಕಾರ, ಹನುಮಂತ ಓಂಕಾರೇಪ್ಪಗೋಳ, ವಿಠ್ಠಲ ಅಂಬಿಗೇರ, ವಿನೋದ ಮಡಿವಾಳರ, ಹನುಮಂತ ಮಾದರ, ಮಾಂತೇಶ ಕುಂಟೋಜಿ, ನಾಗೇಶ ಚಿಗರಿ, ಪಂಡಿತ ಯಡೂರಯ್ಯ, ಚಿಮ್ಮಲಗಿ, ಗುಡದಿನ್ನಿ, ಆಲಿಮಟ್ಟಿ ಇತರರು ಇದ್ದರು.