ಚಿಟಗುಪ್ಪ: ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಮೂಹಿಕ ಜವಾಬ್ದಾರಿ ಪ್ರದರ್ಶಿಸಬೇಕಿದೆ ಹಾಗೂ ಶಾಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ವಿಠ್ಠಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ೩೨ ಲಕ್ಷ ರೂ. ವೆಚ್ಚದ ಸುಸಜ್ಜಿತ ಕೊಠಡಿ ಉದ್ಘಾಟನೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿದ್ದ ಪರಿಸರ ಕಾಳಜಿ ಇಂದಿನ ಯುವಕರಲ್ಲಿ ಉಳಿದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದ್ದು, ಯುವಕರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದರು.
ಇಂದಿನ ದಿನಗಳಲ್ಲಿ ಗಿಡಗಳನ್ನು ನೆಟ್ಟರೆ ಮುಗಿಯುವುದಿಲ್ಲ, ಪ್ರತಿದಿನ ಅವುಗಳನ್ನು ಮಕ್ಕಳಂತೆ ನೋಡಿಕೋಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಗಿಡಗಳ ಬಗ್ಗೆ ಜಾಗೃತಿ ವಹಿಸಿ ಪೋಷಣೆ ಮಾಡಿದರೆ ಮಾತ್ರ ಪರಿಸರ ದಿನಾಚರಣೆ ಸಾರ್ಥಕ ಎಂದು ಹೇಳಿದರು.
ವಿಠಲಪುರ ಗ್ರಾಮಸ್ಥರ ಬೇಡಿಕೆಯಂತೆ ರಸ್ತೆ, ಚರಂಡಿ, ಬಸ್ ನಿಲ್ದಾಣ ಹಾಗೂ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮುಂದೆಯೂ ಇದೇ ರೀತಿ ಬೇಡಿಕೆಯಂತೆ ಗ್ರಾಮಕ್ಕೆ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಗ್ರಾಪಂ ಅಧ್ಯಕ್ಷ ಮಂಜುನಾಥ ಸುಣಗಾರ, ಮುಖಂಡರಾದ ನಾಗಭೂಷಣ ಕಮಠಾಣಾ, ಕುಶಲರಾವ ಯಾಬಾ, ಪಿಡಿಒ ಸುಶಾಂತ, ವಿಜಯಕುಮಾರ ವಾಲಿ, ವಿಜಯಕುಮಾರ ಪಾಟೀಲ, ಬಸವರಾಜ ಚಟ್ಟನಳ್ಳಿ, ರಾಜ ರೆಡ್ಡಿ, ಅಶೋಕ ರೆಡ್ಡಿ, ಪಾಂಡುರಂಗ, ಪ್ರವೀಣ ತರಿ, ಬಸವರಾಜ ಬೇಮಳಖೇಡಾ ಶಾಲೆಯ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಇತರರಿದ್ದರು.