ಹಾಸನ: ಮರ- ಗಿಡಗಳಿಲ್ಲದೇ ಯಾವ ಜೀವಿಯೂ ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ. ಪರಿಸರ ಹಾಳಾದಷ್ಟು ನಮ್ಮೆಲ್ಲರಿಗೂ ಮಾರಕ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ಹಾಸನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್ ಅವರು ಹೇಳಿದರು.
ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲೂ ಪ್ರಜೆಗಳ ಪರಿಸರ ಸಂರಕ್ಷಣೆಯ ಕರ್ತವ್ಯವನ್ನು ಉಲ್ಲೇಖಿಸಲಾಗಿದೆ ಎಂದು ಅವರು ಆಹಾರವನ್ನು ಹಾಳು ಮಾಡುವುದು ಸರಿಯಲ್ಲ. ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಹರೀಶ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಿ ಪರಿಸರವನ್ನು ಶುಚಿಯಾಗಿ ಇಡಲು ಎಲ್ಲರೂ ಗಮನಹರಿಸಬೇಕು ಎಂದು ಹೇಳಿದರು.
ಇಂದು ಪ್ರಪಂಚದಲ್ಲಿ ಪ್ಲಾಸ್ಟಿಕ್ ಸೃಷ್ಟಿಸಿರುವ ಸಮಸ್ಯೆ ಹಾಗೂ ಪರಿಹಾರ ಕುರಿತು ಸಂಪನ್ಮೂಲ ವ್ಯಕ್ತಿ ಡಾ.ವಿ. ವಿಜಯ್ ಅವರು ಅಂಕಿ - ಅಂಶಗಳೊಂದಿಗೆ ವಿಚಾರಗಳನ್ನು ಪ್ರಸ್ತಾಪಿಸಿದರು.
ಪರಿಸರ ಜಾಥ ಜತೆಗೆ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಗೆ, ಸಂಘ- ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಉಪ ಪರಿಸರ ಅಧಿಕಾರಿ ಕೆ. ರವಿಚಂದ್ರ, ಡಾ. ವಿಜಯ್ ಅಂಗಡಿ, ಕಾಂಚನಾ ಮಾಲಾ ಸೇರಿದಂತೆ ಇತರರು ಇದ್ದರು.