ಜಿಲ್ಲೆ

ಪರಿಸರ ಸಂರಕ್ಷಣೆ ಕುರಿತು ಜಾಗೃತಿ

ಶಿಡ್ಲಘಟ್ಟ: ಕರೊನಾ ಸೋಂಕಿನಿಂದಾಗಿ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಉಂಟಾಗಿದೆ. ಈ ವಿಚಾರವನ್ನು ಬೀದಿ ನಾಟಕಗಳ ಮೂಲಕ ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಸೋಮವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.ಬೇರು ಬೆವರು ಕಲಾ ತಂಡ ಬೀದಿ ನಾಟಕ ಪ್ರದರ್ಶಿಸಿ, ಕರೊನಾ ಸೋಂಕಿನಿಂದ ದೂರ ಉಳಿಯಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿತು. ಜತೆಗೆ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನೂ ತಿಳಿಸಿಕೊಟ್ಟಿತು.

ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸರಹಳ್ಳಿ ಮತ್ತು ನಗರದ ಸಿದ್ಧಾರ್ಥ ನಗರದ ಶಾಲೆಯ ಬಳಿಯೂ ಬೀದಿ ನಾಟಕ ಪ್ರದರ್ಶಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ. ತ್ಯಾಗರಾಜ್, ಮಹಿಳಾ ಜ್ಞಾನವಿಕಾಸ ಅಧಿಕಾರಿ ಲಕ್ಷ್ಮೀ, ಸೇವಾ ಪ್ರತಿನಿಧಿ ಲಾವಣ್ಯ, ಲಕ್ಷ್ಮೀ, ಬೇರು ಬೆವರು ಕಲಾ ತಂಡದ ಮಹೇಶ್, ಚಂದ್ರಶೇಖರ್, ಚಿ.ಮು. ಹರೀಶ್ ಮತ್ತಿತರರಿದ್ದರು.