ಜಿಲ್ಲೆ

ಪರಿಸರ ಸಂರಕ್ಷಣೆ ಇಂದಿನ ತರ್ತಾಗಿದೆ;ಪ್ರಾಂಶುಪಾಲ ಡಾ.ಎ.ಜೆ. ಕೃಷ್ಣಯ್ಯ

Hassan - Ramesh H R

ಹಾಸನ: ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಶುದ್ಧ ಪರಿಸರದಿಂದ ನಾವು ನಮ್ಮ ಅರೋಗ್ಯ ಕಾಪಾಡಿಕೊಳ್ಳಬಹುದು. ಹೀಗಾಗಿ ಪರಿಸರ ಸಂರಕ್ಷಣೆ ಇಂದಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎ.ಜೆ. ಕೃಷ್ಣಯ್ಯ ಹೇಳಿದರು.

ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಇಕೋ ಕ್ಲಬ್ ಹಾಗೂ ಹಾಸನ ಅರವಿಂದ್ ಶಾಲೆ, ಮತ್ತು ಜಿಲ್ಲಾ ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನ ಇಕೋ ಕ್ಲಬ್ ವಿದ್ಯಾರ್ಥಿಗಳು ಹಾಗೂ ಹಾಸನದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದು, ಈ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಾವು ಪರಿಸರದ ಸ್ವಚ್ಛತೆ ನಿರ್ವಹಿಸುವ ಜಾಗೃತಿ ಮೂಡಿಸುವ ಮತ್ತು ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನ ಮತ್ತಿತರ ವಿಷಯಗಳ ಬಗ್ಗೆ ತಿಳಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಹಾಸನ ಅರಣ್ಯ ಸಂರಕ್ಷಣಾಧಿಕಾರಿ ಲಷ್ಕರ್ ನಾಯಕ್ ಅವರು ಮಾತನಾಡಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಅರಿವಿನ ಆಂದೋಲನ ಅಗತ್ಯವಿದೆ. ಇದರಿಂದ ನಾವು ನಮ್ಮ ಬದುಕಿನಲ್ಲಿ ಸಾಧ್ಯವಾದಷ್ಟು ಗಿಡ, ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನಿಡಬೇಕಾಗಿದೆ. ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಿ ಹೆಚ್ಚಿನ ಜ್ಞಾನವನ್ನು ಪಡೆಯಲು ಅನೂಕೂಲವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರವಿಂದ್ ಶಾಲೆಯ ಕಾರ್ಯದರ್ಶಿ ಯಶೋಧಾ ರಂಗಸ್ವಾಮಿ, ಡಾ. ಚಂದ್ರಶೇಖರ್, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಅಧೀಕ್ಷಕ ಕಟ್ಟಾಯ ಶಿವಕುಮಾರ್, ಅರಣ್ಯ ಅಧಿಕಾರಿ ಕೃಷ್ಣ ಪೂಜಾರಿ, ಕಾಲೇಜಿನ ಪ್ರಾಧ್ಯಾಪಕರಾದ ಡಾ ಶೃತಿ, ಅರವಿಂದ ಶಾಲೆಯ ಪ್ರಾಂಶುಪಾಲ ಪ್ರಜ್ವಲ್, ಮಹೇಶ್, ವಿಜಯಕುಮಾರ್, ಕಾಲೇಜಿನ ಇಕೋ ಕ್ಲಬ್ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.