ಜಿಲ್ಲೆ

ಪರಿಸರ ರಕ್ಷಿಸುವ ಹೊಣೆ ಎಲ್ಲರದು

ಶಿಕಾರಿಪುರ: ಮುಂದಿನ ಪೀಳಿಗೆಗೆ ಪರಿಸರ ಜಾಗೃತಿ ಮೂಡಿಸುವುದು ನಮ್ಮ ಹೊಣೆ. ಇದಕ್ಕೆ ಪೂರಕವಾಗಿ ಮದುವೆ, ಉಪನಯನ, ಗೃಹಪ್ರವೇಶ ಮತ್ತಿತರ ಶುಭ ಸಮಾರಂಭಗಳ ಸಂದರ್ಭ ಒಬ್ಬೊಬ್ಬರ ಹೆಸರಿಗೆ ಒಂದೊಂದು ಗಿಡ ನೆಡಬೇಕು ಎಂದು ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್ ಹೇಳಿದರು. ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಾತೆಗೊಂದು ಮರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಾವು ಮರಗಳನ್ನು ವೃಕ್ಷಮಾತೆ ಎಂದೇ ಕರೆಯುತ್ತೇವೆ. ನಾವೆಲ್ಲರೂ ಗಿಡಮರಗಳನ್ನು ತಾಯಿಯಂತೆ ಕಾಪಾಡಬೇಕು. ಕಾಡು ಉಳಿದರೆ ಮಾತ್ರ ನಾಡು ಎನ್ನುವುದು ನೆನಪಿರಬೇಕು ಎಂದರು. ಗಿಡ ನೆಡುವವರಿಗೆ ಅವುಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ವಹಿಸಬೇಕು. ನಮ್ಮ ಕೇರಿ, ಊರಿನಲ್ಲಿ ಗಿಡಮರಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳಾ ಸಂಘಗಳು, ಸ್ವಸಹಾಯ ಗುಂಪುಗಳು ಮತ್ತು ವಿವಿಧ ರೀತಿಯ ಮಹಿಳಾ ಸಂಘಟನೆಗಳು, ಸೀಶಕ್ತಿ ಸಂಘಗಳು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲೆ, ಕಾಲೇಜು, ಆಸ್ಪತ್ರೆ, ದೇವಾಲಯ, ಸರ್ಕಾರಿ ಕಟ್ಟಡಗಳು, ಸರ್ಕಾರಿ ಜಾಗಗಳಲ್ಲಿ ಹೆಚ್ಚು ಉಪಯುಕ್ತವಾದ ಗಿಡಗಳನ್ನು ಬೆಳೆಸಬೇಕು ಎಂದು ತಿಳಿಸಿದರು. ಸಮನ್ವಯ ಟ್ರಸ್ಟ್ ಸಂಚಾಲಕ ಕಾಶಿ ಮಾತನಾಡಿ, ಮಾತೆ ಜೀವದಾನ ಮಾಡಿದರೆ, ಮರ ಶುದ್ಧ ಗಾಳಿ ನೀಡಿ ಉಸಿರು ದಾನ ಮಾಡುತ್ತದೆ. ಇಂದು ಪ್ರಕೃತಿ ವಿಕೋಪ, ಅಕಾಲಿಕ ಮಳೆ, ಬರಗಾಲಕ್ಕೆ ಪ್ರಮುಖ ಕಾರಣ ನಮ್ಮ ಕಾಡುಗಳು ನಾಶವಾಗಿರುವುದು. ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ, ಬೆಳೆಯಿದ್ದರೆ ನಮ್ಮೆಲ್ಲರ ಬಾಳು ಸಮೃದ್ಧ. ಅಭಿವೃದ್ಧಿ ಕಾರಣಕ್ಕೆ ನಮ್ಮ ಕಾಡುಗಳು ನಾಶವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸದಸ್ಯರಾದ ರೇಣುಕಾಸ್ವಾಮಿ, ರಾಘವೇಂದ್ರ, ರೂಪಕಲಾ ಹೆಗಡೆ, ಅನುಷ್ಠಾನಾಧಿಕಾರಿ ಸುರೇಶ್, ಮುಖ್ಯಾಧಿಕಾರಿ ಭರತ್, ಸಂಪನ್ಮೂಲ ವ್ಯಕ್ತಿ ದೇವೇಂದ್ರನಾಯಕ್, ಕಚೇರಿ ವ್ಯವಸ್ಥಾಪಕ ರಾಜ್ ಕುಮಾರ್ ಇತರರಿದ್ದರು.

ಪರಿಸರವನ್ನು ಉಳಿಸಿ, ಬೆಳೆಸುವ ಕೆಲಸ ಕೇವಲ ಸರ್ಕಾರದ್ದಲ್ಲ. ಪರಿಸರ ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಅರಣ್ಯ ಇಲಾಖೆ ಪರಿಸರ ಉಳಿಸಲು ಸೇವಾ ಸಂಸ್ಥೆಗಳಿಗೆ ಗಿಡಗಳನ್ನು ನೀಡುತ್ತದೆ. ನಾವು ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗಿಡಗಳನ್ನು ನೆಡುವ ಕಾರ್ಯ ಮಾಡಬಹುದು. ರಮೇಶ್ ಸ್ಥಾಯಿ ಸಮಿತಿ ಅಧ್ಯಕ್ಷ