ಜಿಲ್ಲೆ

ಪರಿಸರ ರಕ್ಷಿಸಲು ಪ್ಲಾಸ್ಟಿಕ್ ನಿಷೇಧವಾಗಲಿ

ಮೈಸೂರು: ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ಲಾಸ್ಟಿಕ್ ನಿಷೇಧವಾಗಬೇಕು ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿ ಪ್ರಿಯಾ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಶ್ವ ಮಾನವ ನೌಕರರ ವೇದಿಕೆ ಹಾಗೂ ನವ ವಿಶ್ವ ಮಾನವ ಟ್ರಸ್ಟ್ ಸಹಯೋಗದಲ್ಲಿ ಮಹಾರಾಜ ಕಾಲೇಜು ಹೊಸ ಕಟ್ಟಡದ ಎದುರು ಗುರುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ಕ್ಯಾಂಪಸ್ ಸೇರಿದಂತೆ ವಿವಿಧೆಡೆ ಪ್ಸಾಸ್ಟಿಕ್ ಬಾಟಲ್‌ಗಳ ಬಳಕೆ ಕಂಡು ಬಂದಿದೆ. ಇದರ ಬದಲು ಗಾಜಿನ ಲೋಟಗಳನ್ನು ಬಳಸಬೇಕು. ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದರು.

ಶಾಸಕ ಕೆ. ಹರೀಶ್‌ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಡಿಸಿಪಿ ಕೆ.ಎಸ್.ಸುಂದರರಾಜ್, ಮೈವಿವಿ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಿಂಡಿಕೇಟ್ ಸದಸ್ಯರಾದ ಗೋಕುಲ್ ಗೋವರ್ಧನ್, ಡಾ.ಜೆ.ಶಿಲ್ಪಾ, ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ, ವಿವಿ ತೋಟಗಾರಿಕೆ ಉಪ ನಿರ್ದೇಶಕ ಎನ್.ಚೆಲುವೇಶ್, ಮೈಸೂರು ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಎಸ್.ಉಮೇಶ್, ವೇದಿಕೆ ಅಧ್ಯಕ್ಷ ಆರ್. ವಾಸುದೇವ ಇದ್ದರು.