ಜಿಲ್ಲೆ

ಪರಿಸರ ರಕ್ಷಣೆ ನಮ್ಮೇಲ್ಲರ ಹೊಣೆ

ಬಾಗಲಕೋಟೆ: ನಗರೀಕರಣ ಹಾಗೂ ಕೈಗಾರೀಕರಣದಿಂದ ಆಗುತ್ತಿರುವ ಪರಿಸರ ಹಾನಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ರಕ್ಷಿಸುವ ಹೊಣೆ ನಮ್ಮೇಲ್ಲರ ಮೇಲಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ನವನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿರುವ ಸಭಾಭವನದಲ್ಲಿ ಮುರನಾಳ ಅಖಂಡೇಶ್ವರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ನಗರೀಕರಣದಿಂದ ಪರಿಸರ ಹಾಳಾಗುತ್ತಿದ್ದು, ಪರಿಸರ ಸಂರಕ್ಷಣೆಯ ಗುರಿಯನ್ನು ಹೊಂದುವುದರ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೂಪಾ.ವಿ.ಕೆ ಮಾತನಾಡಿ, ಪರಿಸರ ನಾಶದಿಂದ ಪ್ರಸ್ತುತ ದಿನಮಾನಗಳಲ್ಲಿ ವಾತಾವರಣದಲ್ಲಿನ ಬದಲಾವಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಅರಣ್ಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಲು ಕರೆ ನೀಡಿದರು.

ಇನ್ನೋರ್ವ ಅತಿಥಿಗಳಾದ ಮುರನಾಳ ಅಖಂಡೇಶ್ವರ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಬಿ.ಹೆಚ್.ನಾಯ್ಕರ್ ಮಾತನಾಡಿ, ಮಾನವ ಪರಿಸರದ ಸಂರಕ್ಷಣೆ ಮಾಡಿದರೆ, ಪರಿಸರವು ಮಾನವನ ಸಂರಕ್ಷಣೆಯನ್ನು ಮಾಡುವುದು ಎಂಬ ಕಿವಿಮಾತಿನ ಮೂಲಕ ಮಾನವನ ಜೀವನದಲ್ಲಿ ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ಅರ್ಥೈಹಿಸಿದರು. ಸದರಿ ಕಾರ್ಯಕ್ರಮಕ್ಕಾಗಿ ತಮ್ಮ ಶಾಲೆಯನ್ನು ಅಯ್ಕೆ ಮಾಡಿಕೊಂಡಿರುವುದಕ್ಕಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬಾಗಲಕೋಟೆಯ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಕುಲಸಚಿವ ಡಾ.ಟಿ.ಬಿ.ಅಳ್ಳೊಳ್ಳಿ ಮಾತನಾಡಿ ವೇದ ಹಾಗೂ ವಚನ ಸಾಹಿತ್ಯದಲ್ಲಿ ಶರಣರು ತಿಳಿಸಿರುವ ಪರಿಸರದ ಸರಂಕ್ಷಣೆಯ ಮಹತ್ವದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಸಾಲು ಮರದ ತಿಮ್ಮಕ್ಕ ನವರ ಸಾಧನೆಯಿಂದ ವಿದ್ಯಾರ್ಥಿಗಳು ಪ್ರೇರೇಪಿತರಾಗಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ತಿಳಿಸಿದರು.

ಕಾರ್ಯಕ್ರಮ ಪೂರ್ವದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಎಲ್ಲ ಗಣ್ಯ ವ್ಯಕ್ತಿಗಳಿಂದ ಹಾಗೂ ವಿದ್ಯಾರ್ಥಿಗಳಿಂದ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಗಂಗನಗೌಡ ಪಾಟೀಲ, ಅಖಂಡೇಶ್ವರ ಪ್ರೌಢಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಆಸೀಪ್ ಬಾಗವಾನ ವಂದಿಸಿದರು. ಈರಣ್ಣ ಬುಳ್ಳಾ ಕಾರ್ಯಕ್ರಮ ನಿರೂಪಿಸಿದರು.