ಜಿಲ್ಲೆ

ಪರಿಸರ ರಕ್ಷಣೆ ನಮ್ಮ ಮನೆಯಿಂದಲೇ ಆರಂಭವಾಗಲಿ: ಡಾ.ಎಚ್.ಎಲ್. ಪ್ರೇಮಲತಾ ಕರೆ

Hassan - Ramesh H R

ಹಾಸನ: ಪರಿಸರ ಅಂದರೆ ನಾವು ಇರುವ ಸುತ್ತಮುತ್ತಲಿನ ವಾತಾವರಣವೇ ಪರಿಸರ. ಪರಿಸರ ಆರೋಗ್ಯವಾಗಿ ಇದ್ದಾಗ ಮಾತ್ರ ನಮ್ಮ ಆರೋಗ್ಯ ಸರಿ ಇರುತ್ತದೆ ಎಂದು ಹಿಮ್ಸ್ ಆಸ್ಪತ್ರೆ ನಿವೃತ್ತ ವೈದ್ಯೆ ಡಾ.ಎಚ್.ಎಲ್. ಪ್ರೇಮಲತಾ ಅವರು ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಕನ್ನಡದ ನಂಬರ್ ಒನ್ ದಿನಪತ್ರಿಕೆ ವಿಜಯವಾಣಿ, ಹಾಸನ ನಗರಪಾಲಿಕೆ ಹಾಗೂ ಚಿತ್ಕಲಾ ಫೌಂಡೇಶನ್ ಸಹಯೋಗದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ಸಂಬಂಧಪಟ್ಟಂತೆ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮ ಪರಿಸರ ರಕ್ಷಣೆಯನ್ನು ಮನೆಯಿಂದಲೇ ಆರಂಭಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತಹ ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನೀವು ಇಂದು ಪರಿಸರ ವಿಷಯವಾಗಿ ಸುಂದರವಾದ ಚಿತ್ರಗಳನ್ನು ಬರೆದಿದ್ದೀರಿ. ಅದೇ ರೀತಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಸುಂದರವಾಗಿ ಇರಿಸಿಕೊಳ್ಳಬೇಕು ಎಂದು ಹೇಳಿದರು.

ಇನ್ನು ಇದೇ ಸಂದರ್ಭದಲ್ಲಿ ಮಹಿಳೆಯರಲ್ಲಿ ಗರ್ಭ ಕೊರಳ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೊನ ವೈರಸ್)ನಿಂದಾಗಿ ಈ ಕಾಯಿಲೆ ಹರಡಲಿದೆ. ಮೊದಲ ಹಂತದಲ್ಲಿ ಈ ಕಾಯಿಲೆ ಪತ್ತೆಯಾದರೆ ಯಶಸ್ವಿಯಾಗಿ ಚಿಕಿತ್ಸೆ ಮೂಲಕ ರೋಗವನ್ನು ತಡೆಗಟ್ಟಬಹುದು. ಆದರೆ ಎರಡು ಅಥವಾ ಮೂರನೇ ಹಂತದಲ್ಲಿ ಪತ್ತೆಯಾದರೆ ಆ ಮಹಿಳೆಯ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಗರ್ಭಕೊರಳ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಲು ಎಚ್‌ಪಿವಿ ಲಸಿಕೆಯನ್ನು ಕೊಡಲಾಗುತ್ತದೆ. 12ರಿಂದ 15 ವರ್ಷದ ಮಕ್ಕಳಿಗೆ ಆರು ತಿಂಗಳಿಗೆ 1 ಡೋಸ್‌ನಂತೆ 2 ಡೋಸ್ ಲಸಿಕೆ ನೀಡಬೇಕು. 15 ವರ್ಷ ಮೇಲ್ಪಟ್ಟವರಿಗೆ 3 ಡೋಸ್ ಲಸಿಕೆಯನ್ನು ನೀಡಿದರೆ ಈ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಹೇಳಿದರು.

ಇದುವರೆಗೂ ಎಚ್‌ಪಿವಿ ವೈರಸ್ ಹೆಣ್ಣು ಮಕ್ಕಳಲ್ಲಿ ಮಾತ್ರ ಕ್ಯಾನ್ಸರ್‌ಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಎಚ್‌ಪಿವಿ ವೈರಸ್ ಗಂಡು ಮಕ್ಕಳಲ್ಲೂ ಕೂಡ ಗಂಟಲು ಕ್ಯಾನ್ಸರ್, ಜನನಾಂಗಳಲ್ಲಿ ಹುಣ್ಣಿನಂತಹ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ಗಂಡು ಮಕ್ಕಳಿಗೂ ಕೂಡ 15 ವರ್ಷದೊಳಗೆ ಲಸಿಕೆ ಹಾಕಿಸಬೇಕಿದೆ. ಹಲವು ದೇಶಗಳಲ್ಲಿ ಗರ್ಭಕೊರಳ ಕ್ಯಾನ್ಸರ್‌ಅನ್ನು ಬಹುತೇಕ ಮಟ್ಟಿಗೆ ನಿಯಂತ್ರಣಕ್ಕೆ ತರಲಾಗಿದೆ. ನಮ್ಮಲ್ಲಿ ಇದೀಗ ಜಾಗೃತಿ ಆರಂಭವಾಗಿದ್ದು, ಲಸಿಕೆ ಇರುವುದರಿಂದ ಈ ರೋಗವನ್ನು ಬಹುಬೇಗನೇ ನಿಯಂತ್ರಣಕ್ಕೆ ತರಬಹುದು ಎಂದು ಹೇಳಿದರು.

ಜೀವಜ್ಯೋತಿ ಆಸ್ಪತ್ರೆ ಮುಖ್ಯಸ್ಥರಾದ ಡಾ.ಅರ್ಜುನ್ ಅವರು ಮಾತನಾಡಿ, ನಾವು ನಮ್ಮ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನಮ್ಮ ಪರಿಸರವನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಂದು ಜಾಗತಿಕವಾಗಿ ಪರಿಸರ ಸಂರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಜಾಗತಿಕ ತಾಪಮಾನ ಏರಿಕೆ, ಹವಾಮಾನದಲ್ಲಿ ಬದಲಾವಣೆಯಿಂದ ಸಾಕಷ್ಟು ಪ್ರಕೃತಿ ವಿಕೋಪಗಳನ್ನು ನಾವು ಇಂದು ಎದುರಿಸುತ್ತಿದ್ದೇವೆ. ಹೀಗಾಗಿ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು.

ಚಿತ್ಕಲಾ ಫೌಂಡೇಶನ್ ಮುಖ್ಯಸ್ಥ ಬಿ.ಎಸ್.ದೇಸಾಯಿ ಅವರು ಮಾತನಾಡಿ, ವಿಜಯವಾಣಿ ದಿನಪತ್ರಿಕೆ ಮಹಾನಗರ ಪಾಲಿಕೆ ಹಾಗೂ ಚಿತ್ಕಲಾ ಫೌಂಡೇಶನ್ ಜತೆ ಸೇರಿ ಮಕ್ಕಳಿಗೆ ಇಂತಹ ಅವಕಾಶ ಮಾಡಿಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಯಾವುದೇ ಕಲಾ ಪ್ರಕಾರಕ್ಕೆ ಭಾಷೆ, ದೇಶಗಳ ಮಿತಿ ಇರುವುದಿಲ್ಲ. ಕಲೆ ಯಾವತ್ತು ಸೃಜನಶೀಲತೆಯನ್ನು ಬಯಸುತ್ತದೆ. ಯಾವತ್ತೂ ನಿಂತ ನೀರಾಗುವುದಿಲ್ಲ. ಹೀಗಾಗಿ ಮತ್ತೆ ಮತ್ತೆ ಅವಕಾಶಗಳು ಬಹಳ ಮುಖ್ಯ. ನಿರಂತರ ಪ್ರಯೋಗಶೀಲತೆಯಿಂದ ಉತ್ತಮ ಕಲಾಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬಹುದು. ಸೃಜನಶೀಲ ವ್ಯಕ್ತಿತ್ವವನ್ನು ಹಾಗೂ ವ್ಯಕ್ತಿತ್ವದ ವಿಕಾಸವನ್ನು ಹೊಂದುವಲ್ಲಿ ಚಿತ್ರಕಲೆ ಮತ್ತು ಲಲಿತ ಕಲೆಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ನಿರಂತರ ಶ್ರದ್ಧೆಯಿಂದ ಕಲೆಯಲ್ಲಿ ತೊಡಗಿಸಿಕೊಂಡಾಗ ಹೊಸ ಹೊಸ ಪ್ರಯೋಗಗಳು ಸಾಧ್ಯ ಆದುದರಿಂದಲೇ ಹಾಸನದ ಪ್ರತಿಭಾವಂತ ಮಕ್ಕಳು ಪರಿಸರ ಜಾಗೃತಿಗಾಗಿ ಚಿತ್ತಾರ ಮಾಡಿ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಮಕ್ಕಳಿದ್ದಾಗ ಪ್ರತಿಭೆ ಅರಳಲು ಅವಕಾಶ ಮಾಡಿಕೊಡುವುದು ಬಹಳ ಮುಖ್ಯ ಎಂದರು.

200 ಮಕ್ಕಳು ಭಾಗಿ

ಜೂನಿಯರ್ ಮತ್ತು ಸೀನಿಯರ್ ಎರಡು ವಿಭಾಗದಲ್ಲಿ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಸಲಾಯಿತು. ನಮ್ಮ ಪರಿಸರ, ನನ್ನ ಮನೆಯಂಗಳ, ಪ್ಲಾಸ್ಟಿಕ್ ಮುಕ್ತ ಪರಿಸರ ಇನ್ನು ಈ ಮೂರು ವಿಷಯಗಳ ಕುರಿತಾಗಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಹತ್ತಕ್ಕೂ ಹೆಚ್ಚು ಶಾಲೆಯ 200 ಮಕ್ಕಳು ಭಾಗವಹಿಸಿದ್ದರು. ಚಿತ್ರಕಲಾವಿದರಾದ ಬಿ.ಎಸ್.ದೇಸಾಯಿ, ಎ.ಸಿ. ಸುರೇಶ್, ಲಿಂಗರಾಜು ಅವರು ತೀರ್ಪುಗಾರರಾಗಿದ್ದರು.

ವಿಜೇತರ ವಿವರ

ಜೂನಿಯರ್ ವಿಭಾಗ (1ರಿಂದ 6ನೇ ತರಗತಿವರೆಗೆ)

ಪ್ರಥಮ- ಲೀಮಗೌಡ, 6ನೇ ತರಗತಿ, ವಿದ್ಯಾಸೌಧ ಪಬ್ಲಿಕ್ ಶಾಲೆ, ಹಾಸನ

ದ್ವಿತೀಯ - ಎಚ್.ಎಸ್. ಧನ್ವೀನ್, 6ನೇ ತರಗತಿ, ವಿಜಯ ಶಾಲೆ, ಹಾಸನ

ತೃತೀಯ - ಧನಿಕಾ ಅಶೋಕ್, 6ನೇ ತರಗತಿ, ರಾಯಲ್ ಅಪೊಲೋ ಶಾಲೆ, ಹಾಸನ

ಏಳು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ

ಸೀನಿಯರ್ ವಿಭಾಗ (7ರಿಂದ 10ನೇ ತರಗತಿವರೆಗೆ)

ಪ್ರಥಮ- ಎಚ್.ಟಿ. ತನಿಶಾ, ವಿಜಯ ಶಾಲೆ ಹಾಗೂ ಎಚ್.ಆರ್. ವರ್ಷಿತಾ, ವಿದ್ಯಾಸೌಧ ಪಬ್ಲಿಕ್ ಶಾಲೆ

ದ್ವಿತೀಯ - ಮನಸ್ವಿ, ವಿದ್ಯಾಸೌಧ ಪಬ್ಲಿಕ್ ಶಾಲೆ ಹಾಗೂ ಎಸ್.ಸಾನ್ವಿ ಕ್ರೈಸ್ತ್ ಶಾಲೆ

ತೃತೀಯ- ಮೋಹಿತ್ ಗೌಡ, ಜಿಜೆಸಿ ಆಲೂರು, ಎಚ್.ಚಿರಂತನ, ವಿಜಯ ಶಾಲೆ

18 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ

----------