ಜಿಲ್ಲೆ

ಪರಿಸರ ಮಿತ್ರ ಶಾಲಾ ಸ್ಪರ್ಧೆ ಪುನರಾರಂಭ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ 2023-24ನೇ ಸಾಲಿನಿಂದ ಪರಿಸರ ಮಿತ್ರ ಶಾಲಾ ಸ್ಪರ್ಧೆ ಯೋಜನೆ ಪುನರಾರಂಭವಾಗಲಿದೆ.
ಜು. 25ರಂದು ಬೆಳಗ್ಗೆ 11 ಗಂಟೆಗೆ ನಗರದ ಕನ್ನಡ ಕುಲಪುರೋಹಿತ ಆಲೂರು ಭವನದಲ್ಲಿ ಜಿಪಂ ಸಿಇಒ ಸ್ವರೂಪ ಟಿ.ಕೆ ಚಾಲನೆ ನೀಡುವರು. ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಸ್ವಯಂ ಮೌಲ್ಯ ಮಾಪನ ಕೈಪಿಡಿ ಬಿಡುಗಡೆ ಮಾಡುವರು. ಅತಿಥಿಯಾಗಿ ಡಿಡಿಪಿಐ ಎಸ್.ಎಸ್. ಕೆಳದಿಮಠ ಆಗಮಿಸುವರು. ಕೆ.ಎಚ್. ನಾಯಕ ಆಶಯ ನುಡಿಗಳನ್ನಾಡುವರು. ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸುವರು.
ಪರಿಸರ ಸಮಿತಿಯ ಸ್ವಯಂ ಮೌಲ್ಯ ಮಾಪನ ಕೈಪಿಡಿಯನ್ನು ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರು ಪಡೆದು ಶಾಲೆಯಲ್ಲಿ ಪರಿಸರಕ್ಕೆ ಕೈಗೊಂಡ ಕಾರ್ಯಗಳ ಮಾಹಿತಿ ಜತೆಗೆ ಪರಿಸರ ಜಾಗೃತಿ ಕುರಿತು ಶಾಲೆ ಮತ್ತು ಸಮುದಾಯದಲ್ಲಿ ಎಷ್ಟು ರಚನಾತ್ಮಕ ಕಾರ್ಯ ಮಾಡಿದ್ದಾರೆ ಎಂಬುದನ್ನು ಕೈಪಿಡಿಯಲ್ಲಿ ಪೂರೈಸಬೇಕು. ಅದಕ್ಕೆ ಅಗತ್ಯ ದಾಖಲೆ ನೀಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಪರಿಸರ ಸಮಿತಿಗೆ ಸೆ. 30ರೊಳಗೆ ಸಲ್ಲಿಸಬೇಕು.
ಪರಿಸರ ತಜ್ಞರ ಸಮಿತಿ ಪರಿಶೀಲಿಸಿ 30 ಶಾಲೆಗಳನ್ನು ಆಯ್ಕೆ ಮಾಡಿ ಶಾಲೆಗಳಿಗೆ ಅಕ್ಟೋಬರ್‌ನಲ್ಲಿ ಭೇಟಿ ನೀಡಿ ಒಂದು ಶಾಲೆಗೆ ಪರಿಸರ ಮಿತ್ರ ಶಾಲೆ ಎಂದು 10,000 ರೂ., 2 ಶಾಲೆಗಳನ್ನು ಹಸಿರು ಶಾಲೆ ಎಂದು ತಲಾ 5000 ರೂ., 3 ಶಾಲೆಗಳಿಗೆ ಹಳದಿ ಶಾಲೆ ಎಂದು ತಲಾ 3000 ರೂ., 5 ಶಾಲೆಗಳಿಗೆ ಬಿಳಿ ಶಾಲೆ ಎಂದು ತಲಾ 2000 ರೂ. ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅವರನ್ನು ಸಂಪರ್ಕಿಸಬಹುದು ಎಂದು ಸಮಿತಿ ಗೌರವ ಕಾರ್ಯದರ್ಶಿ ಡಾ. ವಿಲಾಸ ಕುಲಕರ್ಣಿ ತಿಳಿಸಿದ್ದಾರೆ.