ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ)ವಿರಾಜಪೇಟೆ ತಾಲೂಕು, ಕೃಷಿ ಕಾರ್ಯಕ್ರಮದಡಿಯಲ್ಲಿ ಅಮ್ಮತ್ತಿ ವಲಯದ ಚೆಂಬೆಬೆಳ್ಳೂರು ಕಾರ್ಯಕ್ಷೇತ್ರದ ವತಿಯಿಂದ ಸರ್ಕಾರಿ ಪ್ರೌಢಶಾಲೆ ದೇವಣಗೇರಿ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಲಯ ಅರಣ್ಯ ಅಧಿಕಾರಿ ರಾಘವ ಮಾತನಾಡಿ, ಪರಿಸರ ಸಂರಕ್ಷಣೆ ಹೇಗೆ ಮಾಡಬೇಕು, ಪರಿಸರ ಉಳಿವಿಗಾಗಿ ನಾವು ಸದಾ ಪ್ರಯತ್ನ ಪಡಬೇಕು, ಹಲವು ತಳಿಯ ಗಿಡಗಳನ್ನು ಹೇಗೆ ಉಳಿಸಬೇಕು ಎಂದು ಉತ್ತಮವಾದ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಹರೀಶ್ ಪಿ. ಮಾತನಾಡಿ, ಯೋಜನೆಯ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಒಂದಾಗಿದ್ದು, ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು. ಹಣ್ಣಿನ ಗಿಡಗಳನ್ನು ನಾಟಿ ಮಾಡುವುದರಿಂದ ಶುದ್ಧವಾದ ಗಾಳಿ ಮತ್ತು ಹಣ್ಣು ಸಿಗುತ್ತದೆ ಎಂದು ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ಲೋಕೇಶ್ ಮಾತನಾಡಿ, ಪ್ರಕೃತಿಯನ್ನು ಹೇಗೆ ಉಳಿಸಬೇಕು ಪ್ರಕೃತಿ ಬಗ್ಗೆ ಮಕ್ಕಳಲ್ಲಿ ಜ್ಞಾನ ಬರಬೇಕು. ಪ್ರಕೃತಿ ಸಂಪತ್ತನ್ನು ಉಳಿಸಬೇಕು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಪರಿಸರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಎಲೆಗಳನ್ನು ಗುರುತಿಸುವ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಶಾಲಾ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ವಸಂತ್, ವಲಯ ಮೇಲ್ವಿಚಾರಕ ದಿನೇಶ್, ಶಾಲಾ ಶಿಕ್ಷಕಿ ಸುನೀತಾ, ಚೆಂಬೆಬೆಳ್ಳೂರು ಒಕ್ಕೂಟದ ಉಪಾಧ್ಯಕ್ಷ ಸುಮಾ, ಶೌರ್ಯ ಘಟಕದ ಸದಸ್ಯ ವಿನಯ, ಸೇವಾ ಪ್ರತಿನಿಧಿ ದೇವಕಿ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.