ಜಿಲ್ಲೆ

ಪರಿಸರ ಜಾಗೃತಿ ಒಂದೇ ದಿನಕ್ಕೆ ಸೀಮಿತವಲ್ಲ


ಚಾಮರಾಜನಗರ : ಮುಂದಿನ ಪೀಳಿಗೆ ಆರೋಗ್ಯಕರ ಜೀವನ ನಡೆಸಲು ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಿಸರ್ಗ ವಿದ್ಯಾನಿಕೇತನ ಪ್ರೌಢಶಾಲೆ ಮುಖ್ಯಶಿಕ್ಷಕ ಶಂಕರ್ ತಿಳಿಸಿದರು.

ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಮರಡಿಗುಡ್ಡ ವೃಕ್ಷ ವನದಲ್ಲಿ ಜೆಎಸ್‌ಬಿ ಪ್ರತಿಷ್ಠಾನದಿಂದ ‘ವಿಶ್ವ ಪರಿಸರ ದಿನ- 2023’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ಲಾಸ್ಟಿಕ್ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ, ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಉಳಿಯಬೇಕಿದೆ. ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಇಂತಹ ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಬಹಳ ಹಾನಿಗೊಳಗಾಗುತ್ತಿದೆ. ಇವೆಲ್ಲದಕ್ಕೂ ಕಡಿವಾಣ ಬೀಳಬೇಕಿದೆ. ವಿಶ್ವ ಸಂಸ್ಥೆ ಪರಿಸರ ಸಂರಕ್ಷಣೆಗಾಗಿಯೇ ಕಾರ್ಯಕ್ರಮ ರೂಪಿಸಿದ್ದು ಒಂದು ದಿನಕ್ಕೆ ಮಾತ್ರ ಈ ಕಾರ್ಯಕ್ರಮ ಸಿಮೀತವಾಗಿರಬಾರದು ನಿತ್ಯವೂ ಪರಿಸರದ ದಿನವಾಗಬೇಕು ಎಂದರು.


ಪರಿಸರ ಸಂರಕ್ಷಣೆಗೆ ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳು, ಕಲಾ ಪ್ರದರ್ಶನಗಳು, ಪ್ರಬಂಧ ಬರವಣಿಗೆ, ಭಾಷಣ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಪ್ರತಿ ವರ್ಷ ಜೂ.5ರಂದು ವಿಶ್ವ ಪರಿಸರ ದಿನವನ್ನು ನಿರ್ದಿಷ್ಟ ಥೀಮ್ನೊಂದಿಗೆ ಆಚರಿಸುತ್ತಾ ಬರಲಾಗಿದೆ ಎಂದರು.


ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಧ್ಯೇಯವಾಕ್ಯದ ಉದ್ದೇಶ ಪರಿಸರದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವುದರ ಜತೆಗೆ ಪರಿಸರಕ್ಕೆ ಆಗುವ ಹಾನಿ ತಡೆಯುವುದೇ ಆಗಿದೆ. 2023ರ ಧ್ಯೇಯ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು’ ಎಂದಾಗಿದೆ.

ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ, ವಿಲೇವಾರಿ ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ತಿಳಿಸಿದರು.
ಈ ವೇಳೆ ವೃಕ್ಷ ವನದಲ್ಲಿ ಚೆಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಹೊರಹಾಕಲಾಯಿತು. ಕಾರ್ಯಕ್ರಮದಲ್ಲಿ ಪುಷ್ಪ, ಲೋಹಿತಾಶ್ವ, ರವಿಕುಮಾರ್, ರಾಜೇಶ್ವರಿ, ಸುಷ್ಮಾನಾಯಕ, ಅನಿತಾ, ಸುಮಾ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ನಿಸರ್ಗ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.