ಜಿಲ್ಲೆ

ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಮೂಡಬೇಕು: ಬಿ.ಎ. ಜಗದೀಶ್ ಸಲಹೆ

Hassan - Ramesh H R

ಹಾಸನ: ಕೇವಲ ಮನೆಯ ಸ್ವಚ್ಛತೆ ಮಾಡಿದರೆ ಸಾಲದು. ಇದರ ಜತೆಗೆ ಸುತ್ತಮುತ್ತಲ ಪರಿಸರದ ಬಗ್ಗೆಯೂ ಕಾಳಜಿ ವಹಿಸಿ ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕರಾದ ಬಿ.ಎ. ಜಗದೀಶ್ ತಿಳಿಸಿದರು.

ನಗರದ ಹುಣಸಿನಕೆರೆ ಬಳಿ ಇರುವ ಡಾ. ಅಬ್ದುಲ್ ಕಲಾಂ ಉದ್ಯಾನವನದ ಆವರಣದಲ್ಲಿ ನಗರಸಭೆ, ಹಸಿರು ಭೂಮಿ ಪ್ರತಿಷ್ಠಾನ, ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಗೃತಿ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರೃ ಬಂದ ಮೇಲೆ ದೇಶ ಆರ್ಥಿಕವಾಗಿ ಸಾಕಷ್ಟು ಮುಂದುವರಿದಿದೆ. ಆದರೆ, ಪರಿಸರದ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ನಾವು ನಮ್ಮ ಮನೆ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇವೆ ಹೊರತು ನೆರೆ-ಹೊರೆ, ಪರಿಸರದ ಬಗ್ಗೆ ಯೋಚಿಸುವುದಿಲ್ಲ. ನಾವು ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಂತೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ನಾವು ಇರುವ ಜಾಗ ಮತ್ತು ಸುತ್ತಮುತ್ತಲ ಪರಿಸರ ಉತ್ತಮವಾಗಿರಬೇಕು ಎನ್ನುವ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬಹುದು. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ ಎನ್ನುವ ಮಾತು ಇದೆ. ಕಸ ಸಂಗ್ರಹಿಸಲು ನಗರಸಭೆಯಿಂದ ಎಲ್ಲಾ ವಾರ್ಡ್‌ಗಳಿಗೂ ವಾಹನ ಬರುತ್ತಿದ್ದರೂ ಅನೇಕರು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದು ಬೇಸರದ ಸಂಗತಿ. ಇಂತಹ ಪ್ರವೃತ್ತಿ ಬದಲಾಗಬೇಕು. ಜನರು ಆಸಕ್ತಿ ತೋರಿದಾಗ ಮಾತ್ರ ಸ್ವಚ್ಛತೆಯಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಹಾಸನದ ಇತಿಹಾಸ ಪ್ರಸಿದ್ಧ ಹುಣಸಿನಕೆರೆಯು 213 ಎಕರೆ ವಿಸ್ತೀರ್ಣ ಹೊಂದಿದ್ದು ನಗರದ ಬಹುಪಾಲು ಕೊಳಚೆ ನೀರು ಸೇರಿ ಕಲುಷಿತಗೊಂಡಿದೆ. ಈ ಕೆರೆಗೆ ಕೊಳಚೆ ನೀರು ಸೇರುವುದನ್ನು ತಪ್ಪಿಸಲು ಪ್ರಯತ್ನಗಳು ನಡೆಯುತ್ತಲೇ ಇದೆ. ಹಸಿರುಭೂಮಿ ಪ್ರತಿಷ್ಠಾನ ಹಾಗೂ ಹಿರಿಯರ ವೇದಿಕೆಯ ನೇತೃತ್ವದಲ್ಲಿ, ಸ್ಥಳೀಯ ನಿವಾಸಿಗಳು ಸೇರಿ ರಚಿಸಿರುವ ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯು ನಗರಸಭೆ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಣ್ಣ ನೀರಾವರಿ ಇಲಾಖೆಯ ನೆರವಿನೊಂದಿಗೆ 2019ರ ಆಗಸ್ಟ್ 1ರಂದು ಒಂದು ವಾರ ಕೆರೆಯಲ್ಲಿ ಬೆಳೆದು ನಿಂತಿದ್ದ ಹಸಿರು ಕಳೆಯನ್ನು ತೆಗೆದು ಕೆರೆಯನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆಸಿತು ಎಂದು ಸ್ಮರಿಸಿದರು.
ಹಸಿರುಭೂಮಿ ಪ್ರತಿಷ್ಠಾನ ಹಾಗೂ ಹಿರಿಯ ನಾಗರಿಕರ ವೇದಿಕೆಯ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರವು ಸತ್ಯಮಂಗಲ, ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳ ಪುನಶ್ಚೇತನಕ್ಕೆ 20 ಕೋಟಿ ರೂ. ಅನುದಾನ ನೀಡಿತ್ತು. ಆದರೆ ಸರ್ಕಾರ ಬದಲಾದ ನಂತರ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ರೂ. ಯೋಜನೆ ರೂಪಿಸಿತು. ಮತ್ತೊಂದು ಸರ್ಕಾರ ಬಂದಾಗ 144 ಕೋಟಿ ರೂ. ಯೋಜನೆಯನ್ನು ವಿಭಜಿಸಿ 6 ಕೆರೆಗಳು 9 ಉದ್ಯಾನವನಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿತು. ಈ ಯೋಜನೆಯಲ್ಲಿ ಹುಣಸಿಕೆರೆ ಅಭಿವೃದ್ಧಿಗೆ 5 ಕೋಟಿ 5 ಲಕ್ಷ ರೂ. ಮೀಸಲಿಡಲಾಗಿದೆ. ಈ ಮಧ್ಯೆ ಹುಣಸಿನಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು, ಕೊಳಚೆ ನೀರು ಹರಿದು ಬರುವುದನ್ನು ತಪ್ಪಿಸಿ, ಇದನ್ನೊಂದು ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ಚಿಂತನೆ ನಡೆದಿದೆ. ಇಂತಹ ಮಹತ್ವದ ಯೋಜನೆಯು ಕಾರ್ಯರೂಪಕ್ಕೆ ಬರಬೇಕಾದರೆ ಕೆರೆಯ ಆವರಣ ಮತ್ತು ಕೆರೆಯ ಸಮೀಪದಲ್ಲಿ ಇರುವ 80 ಅಡಿ ರಸ್ತೆ ಸ್ವಚ್ಛವಾಗಿರಬೇಕು. ಈ ಸ್ವಚ್ಛತೆಯ ಕಾರ್ಯದಲ್ಲಿ ಹುಣಸಿಕೆರೆ ಬಡಾವಣೆ, ರಾಜಕುಮಾರ್ ನಗರ, ತಮ್ಹಾಪುರ ಮತ್ತಿತರ ಸಮೀಪದ ಬಡಾವಣೆಗಳ ನಿವಾಸಿಗಳ ಸಹಕಾರವು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಆರ್. ಮೋಹನ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕಿ ಶ್ವೇತಾ, ನಗರಸಭೆ ಆಯುಕ್ತ ಸತೀಶ್ ಕುಮಾರ್, ಸ್ಕೌಟ್ಸ್ ಆಂಡ್ ಗೈಡ್ಸ್ ಹಿರಿಯರಾದ ಕಾಂಚನಾ ಮಾಲಾ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಅಬ್ದುಲ್ ಬಶೀರ್, ಕ್ಲಿಯರಿನ್ ಸಂಸ್ಥೆಯ ಸಂಸ್ಥಾಪಕ ಚಂದ್ರಶೇಖರ್, ನಗರಸಭೆ ಸದಸ್ಯರಾದ ರಫೀಕ್, ಸುಜಾತಾ ಮಹೇಶ್, ಗೌಸಿಯಾ ಅಲ್ಮಸ್, ನವೀನ್ ಕುಮಾರ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ನಾಗೇಂದ್ರ,ಪ್ರಕಾಶ್, ಅಪ್ಪಾಜಿಗೌಡ ಇತರರು ಉಪಸ್ಥಿತರಿದ್ದರು.