ಕಿಕ್ಕೇರಿ: ದೀರ್ಘಕಾಲ ಉಳಿದು, ಶುದ್ಧ ಗಾಳಿ ನೀಡುವ ಮರಗಿಡಗಳನ್ನು ಬೆಳೆಸುವ ಪಾಠವನ್ನು ಮಕ್ಕಳಿಗೆ ಕಲಿಸುವ ಕೆಲಸವಾಗಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ ತಿಳಿಸಿದರು.
ಹೋಬಳಿಯ ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೂದೋಟದಂತಿರುವ ಮಕ್ಕಳ ಮನಸ್ಸಿಗೆ ಹಸಿರು ಉಸಿರಾಗಿ ಉಳಿಯಲು ತಿಳಿಹೇಳುವ ಕೆಲಸವಾಗಬೇಕಿದೆ. ಮಕ್ಕಳಲ್ಲಿ ಜಾಗೃತಿ ಮೂಡಿದ್ದಲ್ಲಿ ಭವಿಷ್ಯದಲ್ಲಿ ಶುದ್ಧ ಗಾಳಿ ಸಿಗಲು ಸಾಧ್ಯ. ಸ್ವಾರ್ಥಕ್ಕಾಗಿ ಮರಗಿಡಗಳು ನಾಶವಾಗುತ್ತಿದ್ದು, ಕಾಡುಪ್ರಾಣಿಗಳು ನಾಡಿಗೆ ನುಗ್ಗುವಂತಾಗಿದೆ. ಕಾಡು ನಾಡಾದಲ್ಲಿ ಪ್ರಾಣಿಗಳು ಎಲ್ಲಿ ಬದುಕಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕ ರಮೇಶ್ ಮಾತನಾಡಿ, ಅರಣ್ಯಗಳನ್ನು ಬೆಳೆಸಲು ಗುಡ್ಡಗಾಡು, ಬಯಲು ಪ್ರದೇಶದಲ್ಲಿ ನೀಲಗಿರಿಯಂತಹ ಮರಗಿಡ ಬೆಳೆಸದೆ ಕಾಡಿನ ಗಿಡ ಬೆಳೆಸಲು ಸಮುದಾಯ ಮುಂದಾಗಬೇಕಿದೆ. ಮಕ್ಕಳು ಮರಗಿಡ ಬೆಳೆಸಲು ಮನಸ್ಸು ಮಾಡಿದರೆ ಪ್ರತಿ ಗ್ರಾಮಗಳು ಮರಗಿಡಗಳಿಂದ ಕಂಗೊಳಿಸಲಿವೆ. ಕಾಲಕ್ಕೆ ತಕ್ಕಂತೆ ಮಳೆ, ಬೆಳೆ ಎಲ್ಲವೂ ಸಿಗಲಿದೆ. ಜಲಕ್ಷಾಮ, ಪ್ರಾಕೃತಿಕ ವಿಕೋಪ ತಡೆಯಲು ಎಳೆಯ ಮನಸ್ಸುಗಳನ್ನು ಹಸಿರುಕರಣಗೊಳಿಸಲು ಗಟ್ಟಿಗೊಳಿಸಬೇಕಿದೆ ಎಂದು ಮನವಿ ಮಾಡಿದರು.
ಪರಿಸರ ಜಾಗೃತಿಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ರಮೇಶ್, ಶಿಕ್ಷಕ ಗೋವರ್ಧನ್, ಸಿದ್ದರಾಮಪ್ಪ, ಗುರುಲಿಂಗಸ್ವಾಮಿ, ನಟರಾಜು, ರಾಘವೇಂದ್ರ, ಅಸ್ಮಾ ಜೌಖಿಯಾ, ಪುಷ್ಪಾವತಿ ಮತ್ತಿತರರಿದ್ದರು.