ಜಿಲ್ಲೆ

ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಕೈ ಜೋಡಿಸಿ

ಕಾನಹೊಸಹಳ್ಳಿ: ಜಾಗತಿಕವಾಗಿ ತಾಪಮಾನ ಉಲ್ಬಣವಾಗಲು ಪರಿಸರದಲ್ಲಿನ ಅಸಮತೋಲನ ಕಾರಣವಾಗಿದ್ದು, ಪ್ರಕೃತಿ ವಿಕೋಪದಂತಹ ಅವಘಡ ತಪ್ಪಿಸಲು ಪರಿಸರ ಕಾಪಾಡಿಕೊಳ್ಳಬೇಕಿದೆ. ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಪರಿಸರ ಸಂರಕ್ಷಣೆ ಮಾಡುವಲ್ಲಿ ವಿಫಲರಾಗಿರುವುದರಿಂದ ಮನುಕುಲದ ಮೇಲೆ ಅಡ್ಡ ಪರಿಣಾಮವಾಗುತ್ತಿದೆ. ಅದರ ಫಲವಾಗಿ ನಾವು ಸೇವನೆ ಮಾಡುವ ಗಾಳಿಯು ಸಹ ವಿಷವಾಗಿ ಪರಿಣಾಮಿಸಿದೆ ಎಂದರು.

ಜಾಗತಿಕ ತಾಪಮಾನದಲ್ಲಿ ಏರುಪೇರು ಉಂಟಾಗಿರುವುದು ಪ್ರಕೃತಿ ವಿಕೋಪಕ್ಕೂ ಕಾರಣವಾಗಿದೆ. ಪರಿಸರ ಸಂರಕ್ಷಣೆ ಕೂಗು ಪರಿಸರ ದಿನಕ್ಕೆ ಮಾತ್ರ ಸೀಮಿತವಾಗಿದೆ. ವರ್ಷಪೂರ್ತಿ ಪರಿಸರ ಸಂರಕ್ಷಣೆಯ ಧ್ವನಿ ಕೇಳಿಬರಬೇಕು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಾಲಕರ ಹೆಸರಿನಲ್ಲಿ ಗಿಡ ನೆಡಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸಲಹೆ ನೀಡಿದರು.

ಮಾಕನಡಕು ಗ್ರಾಪಂ ಅಧ್ಯಕ್ಷ ಎಂ.ಸಿ.ಆಶೋಕ ನಾಯ್ಕ, ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೆ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಸಾಮಾಜಿಕ ಅರಣ್ಯ ಇಲಾಖೆಯ ಆರ್‌ಎಫ್‌ಒ ಲತಾ, ಗುಡೇಕೋಟೆ, ಕರಡಿಧಾಮದ ಅರಣ್ಯಾಧಿಕಾರಿ ಜಗದೀಶ್ ಮೇದ, ಕಾಕಿಬಸಣ್ಣ, ಉಪ ವಲಯ ಅರಣ್ಯಾಧಿಕಾರಿ ಮಧುಸೂದನ್, ರೆಹಮತ್, ಉಪನ್ಯಾಸಕರಾದ ರಾಮಸ್ವಾಮಿ, ಮಹೇಶ್, ಚಂದ್ರಕಾಂತ, ಉನ್ನತಿ, ವಸಂತಕುಮಾರ್, ಸಂತೋಷ ಇದ್ದರು.