ಜಿಲ್ಲೆ

ಪರಿಸರ ಉಳಿವಿಗೆ ಅರಿವು ಅಗತ್ಯ : ಎಚ್.ಆರ್.ಮಮತಾ


ಚನ್ನರಾಯಪಟ್ಟಣ : ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರದ ಅಭಿವೃದ್ಧಿ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷೆ ಎಚ್.ಆರ್.ಮಮತಾ ಹೇಳಿದರು.


ಪಟ್ಟಣದ ಮಂಗಳೂರು ಪಿಯು ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ರಸಪ್ರಶ್ನೆ, ಪ್ರಬಂಧ ಹಾಗೂ ಚರ್ಚಾ ಸ್ವರ್ಧೆಗೆ ಚಾಲನೆ ನೀಡಿ, ಪರಿಸರ ಉಳಿವಿಗೆ ಶೈಕ್ಷಣಿಕ ಹಂತದಿಂದಲೇ ಅರಿವು ಅಗತ್ಯ ಎಂದರು.


ನಗರಗಳ ಅಭಿವೃದ್ಧಿ, ರಸ್ತೆ ನಿರ್ಮಾಣ, ಕೃಷಿ ಹಾಗೂ ಇನ್ನಿತರೆ ಚಟುವಟಿಕೆಯ ಸಲುವಾಗಿ ಗಿಡ-ಮರಗಳನ್ನು ಕಡಿಯುತ್ತಿರುವ ಪರಿಣಾಮ ದಿನದಿಂದ ದಿನಕ್ಕೆ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ಇದರಿಂದ ಪ್ರಕೃತಿಯು ಸಮತೋಲನ ಕಳೆದುಕೊಳ್ಳುತ್ತಿದ್ದು ಹಲವಾರು ಸಮಸ್ಯೆಗಳು ಎದುರಾಗುತ್ತಿವೆ ಎಂದರು.


ಇನ್ನ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಎಲ್ಲಂದರಲ್ಲಿ ಪ್ಲಾಸ್ಟಿಕ್ ಹಾಗೂ ಇತರೆ ಅಪಾಯಕಾರಿ ತ್ಯಾಜ್ಯವನ್ನು ಬಿಸಾಡುತ್ತಿರುವ ಪರಿಣಾಮ ಅನೈರ್ಮಲ್ಯ ತಾಂಡವಾಡುವುದರ ಜತೆಗೆ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಎಚ್ಚರಿಸಿದರು.


2022 ನೇ ಸಾಲಿನ ಸಂಯುಕ್ತ ಭಾರತ ಕಾರ್ಯಕ್ರಮದಡಿ ಆಯೋಜಿಸಿದ್ದ ಸ್ವಚ್ಛತಾ ರಸಪ್ರಶ್ನೆ, ಪ್ರಬಂಧ ಹಾಗೂ ಚರ್ಚಾ ಸ್ವರ್ಧೆಗಳಲ್ಲಿ ಪಾಲ್ಗೊಂಡು ಜಯಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂಧಿಸಲಾಯಿತು. ಬಳಿಕ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿ ಪರಿಸರದ ಬಗ್ಗೆ ಅರಿವು ಮೂಡಿಸಲಾಯಿತು.


ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ವಿ.ವಿಜಯ್, ಪುರಸಭಾ ಅಧಿಕಾರಿ ರಾಜಪ್ಪ, ಮಂಗಳೂರು ಪಿಯು ಕಾಲೇಜಿನ ಕಾರ್ಯದರ್ಶಿ ಜಿ.ಎಸ್.ಪ್ರದೀಪ್, ಪ್ರಾಂಶುಪಾಲ ಎಚ್.ಎನ್.ಪರಮೇಶ್, ಕಾಲೇಜು ಉಪನ್ಯಾಸಕರು ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಹಾಜರಿದ್ದರು.