ಹಾಸನ: ಇಂದು ನಾವು ಪರಿಸರ ಕಾಪಾಡಿದರೆ ಮಾತ್ರ ನಮ್ಮ ಜೀವನವನ್ನು ಪರಿಸರ ಕಾಪಾಡುತ್ತದೆ ಎಂದು ಹಾಸನ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಕೆ.ಪಿ. ನವೀನ್ ಕುಮಾರ್ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಹೊರವಲಯ ಸತ್ಯಮಂಗಲದಲ್ಲಿರುವ ಟೈಮ್ಸ್ ಗುರುಕುಲ ಸಿಬಿಎಸ್‌ಇ ನರ್ಸರಿ ಮಕ್ಕಳು ನಗರದ ಬಿ.ಎಂ. ರಸ್ತೆ, ಡೇರಿ ವೃತ್ತದ ಬಳಿ ಇರುವ ಜಿಲ್ಲಾ ಅಗ್ನಿ ಶಾಮಕ ದಳದ ಠಾಣೆ ಆವರಣದಲ್ಲಿ ಬುಧವಾರ ಗಿಡವನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಿದರು. ಈ ವೇಳೆ ನವೀನ್ ಕುಮಾರ್ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಗ್ನಿಶಾಮಕ ದಳದಲ್ಲಿ ಗಿಡವನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಟೈಮ್ಸ್ ಗುರುಕುಲ ಶಾಲಾ ವತಿಯಿಂದ ಅಗ್ನಿಶಾಮಕ ದಳಕ್ಕೆ 25 ಗಿಡವನ್ನು ನೀಡಿದ್ದು, ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಉತ್ತಮ ಪರಿಸರ ಇದ್ದರೆ ಮಾತ್ರ ನಾವೆಲ್ಲಾ ಬದುಕಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ನಾವುಗಳೆಲ್ಲಾ ಜೀವಿಸುತ್ತಿರುವುದು ಈ ಪರಿಸರದಿಂದ. ನಾವು ಪರಿಸರ ಕಾಪಾಡಿದರೆ ನಮ್ಮ ಜೀವನವನ್ನು ಪರಿಸರವು ಕಾಪಾಡುತ್ತದೆ. ಜತೆಗೆ ಮಕ್ಕಳ ಭವಿಷ್ಯವು ಪರಿಸರದೊಂದಿಗೆ ಬೆಸುಗೆ ಹೊಂದಿರುವುದರಿಂದ ಪರಿಸರವನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕು. ಪರಿಸರ ದಿನ ಜೂನ್ 5ಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿದಿನವು ಪರಿಸರ ಸಂರಕ್ಷಣೆಗಾಗಿ ಹೋರಾಡಬೇಕು. ನಮ್ಮ ಅಗ್ನಿಶಾಮಕ ಠಾಣೆ ಮುಖ್ಯ ಕಚೇರಿಯಿಂದಲೂ ಆದೇಶ ಬಂದಿದ್ದು, ಕರ್ನಾಟಕದಲ್ಲಿರುವ 230 ಅಗ್ನಿಶಾಮಕ ಠಾಣೆಗಳಲ್ಲಿ ಈ ವರ್ಷದಿಂದ ಮುಂದಿನ ವರ್ಷದೊಳಗೆ 1 ಲಕ್ಷ ಗಿಡವನ್ನು ನೆಡುವುದಕ್ಕೆ ಹಾಗೂ ಪೋಷಣೆ ಮಾಡಲು ಮಾಹಿತಿ ನೀಡಲಾಗಿದೆ. ಪ್ರತಿ ಅಗ್ನಿ ಶಾಮಕ ಕಚೇರಿ ಆವರಣದಲ್ಲಿ ಗಿಡ ನೆಟ್ಟು ಪೋಷಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಟೈಮ್ಸ್ ಗುರುಕುಲ ಸಿಬಿಎಸ್‌ಇ ಶಾಲಾ ಕೋರ್ಡಿನೇಟರ್ ಶೈಲಾ ಮಾತನಾಡಿ, ಪರಿಸರ ಎಂಬುದು ಮಕ್ಕಳಿಂದಲೇ ಜಾಗೃತಿ ಬಂದರೆ ಮುಂದೆ ಉತ್ತಮ ಪರಿಸರ ಕಾಪಾಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನರ್ಸರಿ ಮಕ್ಕಳಿಂದಲೇ ಇಂತಹ ಅರಿವು ಮೂಡಿಸಲಾಗುತ್ತಿದೆ ಎಂದರು.