ಜಿಲ್ಲೆ

ಪರಿಸರ ಇಂಜಿನಿಯರ್ ನಿರ್ಲಕ್ಷೃದಿಂದ ಪಟ್ಟಣ ಗಬ್ಬುನಾರುತ್ತಿದೆ

ಪಾಂಡವಪುರ: ಪುರಸಭೆಯಲ್ಲಿ ಲಭ್ಯವಿರುವ ಪೌರಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆ ನಿರ್ವಹಿಸುವಲ್ಲಿ ಪರಿಸರ ಇಂಜಿನಿಯರ್ ವಿಫಲರಾಗಿದ್ದು, ಅವರ ಬೇಜವಾಬ್ದಾರಿತನದಿಂದ ಪಟ್ಟಣ ಗಬ್ಬು ನಾರುವಂತಾಗಿದೆ ಎಂದು ಪುರಸಭೆ ಸದಸ್ಯ ಚಂದ್ರು ಆರೋಪಿಸಿದರು.


ಪಟ್ಟಣದ ಸ್ವಚ್ಛತೆಗಾಗಿ 35 ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 24 ಕಾರ್ಮಿಕರು ಕಾಯಂ ಹಾಗೂ 11 ಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 5.30 ಕ್ಕೆ ಆಗಮಿಸುವ ಕಾರ್ಮಿಕರ ಹಾಜರಾತಿ ಪಡೆದು ಎಲ್ಲರನ್ನು ವಿಂಗಡಣೆ ಮಾಡಿ ಸ್ವಚ್ಛತೆಗೆ ಕಳುಹಿಸುವ ಕೆಲಸವನ್ನು ಪರಿಸರ ಇಂಜಿನಿಯರ್ ಶಫಿನಾಜ್ ನಿರ್ವಹಿಸುತ್ತಿಲ್ಲ. ಹೀಗಾಗಿ ಪುರಸಭೆ ಸದಸ್ಯರೇ ಕಚೇರಿಗೆ ಆಗಮಿಸಿ ಪೌರಕಾರ್ಮಿಕರನ್ನು ಕರೆದುಕೊಂಡು ಹೋಗಿ ವಾರ್ಡ್‌ಗಳ ಸ್ವಚ್ಛತೆ ಬಗ್ಗೆ ನಿರ್ದೇಶನ ಮಾಡಬೇಕಿದೆ. ಎಲ್ಲವನ್ನೂ ಪುರಸಭೆ ಸದಸ್ಯರೇ ಮಾಡಬೇಕಾದರೆ ಅಧಿಕಾರಿಗಳು ಯಾಕೆ ಬೇಕು? ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿ ಆರೋಪಿಸಿದರು.


ಪರಿಸರ ಇಂಜಿನಿಯರ್ ಅವರ ಸೂಕ್ತ ನಿರ್ದೇಶನ ಹಾಗೂ ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಪೌರಕಾರ್ಮಿಕರ ನಿರ್ವಹಣೆಗಾಗಿ ನೇಮಕವಾಗಿರುವ ಮೇಸ್ತ್ರಿ ಹಾಗೂ ಸೂಪರ್‌ವೈಸರ್‌ಗಳ ಕೈಕಟ್ಟಿದಂತಾಗಿದೆ. ಪೌರಕಾರ್ಮಿಕರಿಗೆ ಬೆಳಗ್ಗೆ 9 ಗಂಟೆಗೆ ತಿಂಡಿ ವ್ಯವಸ್ಥೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಬೆಳಗ್ಗೆ 10.30 ಆದರೂ ತಿಂಡಿ ವ್ಯವಸ್ಥೆ ಮಾಡುವುದಿಲ್ಲ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಪೌರಕಾರ್ಮಿಕರ ಹಾಜರಾತಿಯನ್ನು ಕೇವಲ ಬಿಳಿ ಹಾಳೆಯಲ್ಲಿ ನಮೂದಿಸಲಾಗುತ್ತಿದೆ. ಲಭ್ಯವಿರುವ ಪೌರಕಾರ್ಮಿಕರಲ್ಲಿ ಪ್ರತಿನಿತ್ಯ ಏಳೆಂಟು ಕಾರ್ಮಿಕರು ಕೆಲಸಕ್ಕೆ ಗೈರಾಗುತ್ತಾರೆ. ಆರೇಳು ಕಾರ್ಮಿಕರು ಚಾಲಕ ಹುದ್ದೆ ನಿರ್ವಹಿಸುತ್ತಿದ್ದಾರೆ. ಉಳಿದವರಿಂದ ಕೆಲಸ ತೆಗೆದುಕೊಳ್ಳಬೇಕಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಪಟ್ಟಣದ ನಾಗರಿಕರಿಂದ ಪುರಸಭೆ ಸದಸ್ಯರು ಬೈಗುಳ ಕೇಳಬೇಕಿದೆ ಎಂದು ಕಿಡಿಕಾರಿದರು.


ಎರಡು ವರ್ಷದಿಂದ ವಾಹನ ದುರಸ್ತಿ ಮಾಡಿಸಿಲ್ಲ: ಕಸ ಸಂಗ್ರಹಿಸುವ ಆಟೋವನ್ನು ದುರಸ್ತಿಗೆಂದು ಗ್ಯಾರೇಜ್‌ಗೆ ಬಿಟ್ಟು ಎರಡು ವರ್ಷ ಕಳೆದಿದೆ. ಸಣ್ಣ ರಿಪೇರಿ ಕೆಲಸಕ್ಕೆಂದು ಬಿಟ್ಟಿರುವ ಆಟೋ ರಿಪೇರಿ ಮಾಡಿಸಿ ಹಿಂಪಡೆಯುವ ಕೆಲಸ ಅಧಿಕಾರಿಗಳಿಂದ ಆಗಿಲ್ಲ. ಇದೇ ರೀತಿ ಕಸ ಸಂಗ್ರಹಿಸುವ ಟ್ರ್ಯಾಕ್ಟರ್ ಟ್ರ್ಯಾಲಿಯೊಂದು ಏನಾಯಿತು ಎಂಬುದೇ ತಿಳಿಯದಾಗಿದೆ. ಪುರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನ ಸದಸ್ಯರಿಗೆ ಬೇಸರ ಹುಟ್ಟಿಸಿದೆ. ಈ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜೆಡಿಎಸ್ ಮುಖಂಡ ಸೂರಿ, ಪುರಸಭೆ ನೌಕರರಾದ ರಮೇಶ್, ಸುಬ್ರಹ್ಮಣ್ಯ ಇದ್ದರು.