ಚಾಮರಾಜನಗರ: ಭಾರತೀಯ ಭಾಷೆಗಳ ಸಮನ್ವಯತೆ ಹಾಗೂ ಎಲ್ಲ ಭಾಷೆಗಳ ವಿಶೇಷ ಕೊಡುಗೆ ಮತ್ತು ಸಂಸ್ಕೃತಿ ತಿಳುವಳಿಕೆಯ ಜಾಗೃತಿ ಮೂಡಿಸುವುದೇ ಭಾರತೀಯ ಸಾಹಿತ್ಯ ಪರಿಷತ್ತಿನ ದೃಷ್ಟಿಯಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಾಂತ್ಯ ಸಂಪರ್ಕ ಪ್ರಮುಖ ಮೈಸೂರಿನ ಡಾ.ವಿ. ರಂಗನಾಥ್ ತಿಳಿಸಿದರು.
ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾಮರಾಜನಗರ ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್‌ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ್ ಋಗ್ವೇದಿ ಮಾತನಾಡಿ, ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂತಹ ಸರಕಲ್ಲ .ಅದು ನಾವು ಪಡೆದುಕೊಳ್ಳಬೇಕಾದದ್ದು, ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ತಂದುಕೊಡುತ್ತೇನೆ ಎಂಬ ವೀರ ಘ ರ್ಜನೆಯ ಮೂಲಕ ಸುಭಾಷ್ ಚಂದ್ರಬೋಸ್ ಹೋರಾಡಿದರು ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ ದಾನೇಶ್ವರಿ ಮಾತನಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಕೊಡುಗೆಯನ್ನು ನಾವೆಲ್ಲರೂ ಬಾಲ್ಯದಿಂದಲೂ ಅರಿತಿದ್ದೇವೆ. ನೇತಾಜಿ ಎಂದರೆ ಮನಸ್ಸಿಗೆ ಹೊಸ ಆತ್ಮವಿಶ್ವಾಸವನ್ನು, ಗೌರವವನ್ನು, ಧೈರ್ಯವನ್ನು, ಸಾಹಸವನ್ನು ಹುಟ್ಟುಹಾಕುತ್ತದೆ ಎಂದು ತಿಳಿಸಿದರು. ನೂತನ ಪದಾಧಿಕಾರಿಗಳ ಪರಿಚಯವನ್ನು ಡಾ.ರಂಗನಾಥ್ ಮಾಡಿಕೊಟ್ಟರು.
ಬಿ.ಕೆ ಆರಾಧ್ಯ, ಸುದರ್ಶನ್. ವಿ.ವಿಶಾಲಾಕ್ಷಿ ಹರದನಹಳ್ಳಿ, ಗಾಯತ್ರಿ ಚಂದ್ರಶೇಖರ್, ಲೋಕೇಶ್, ಪರಮೇಶ್ವರಪ್ಪ, ಸುರೇಶ್, ಉಪನ್ಯಾಸಕ ಸುರೇಶ್, ಪದ್ಮಾಕ್ಷಿ , ಸತೀಶ್, ಮನೋಜ್, ಪೂರ್ಣಶ್ರೀ ಇದ್ದರು.