ನೆಲಮಂಗಲ: ಶ್ರದ್ಧೆ ಭಕ್ತಿ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಸಾಧನೆ ಸುಲಭ ಎಂದು ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ಪುಟ್ಟಶಾಮಯ್ಯ ಅಭಿಪ್ರಾಯಪಟ್ಟರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಸಭಾಂಗಣದಲ್ಲಿ ಶನಿವಾರ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಸಬ್ ಜೂನಿಯರ್, ಜೂನಿಯರ್ ಪೆಂಕಾಕ್ ಸಿಲತ್ ಪಂದ್ಯಾವಳಿ-2021 ಉದ್ಘಾಟಿಸಿ ಮಾತನಾಡಿದರು.
ಕಲಿಕೆಗೆ ವಯಸ್ಸಿನ ಅಂತರವಿಲ್ಲ. ಆಸಕ್ತಿಯಿರುವ ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತವಾಗಿ ಕಲಿಯುವ ಹಕ್ಕಿದೆ. ಕ್ರೀಡಾಪಟ್ಟುವಿನಲ್ಲಿರುವ ಸಾರ್ಮಥ್ಯವನ್ನು ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಹಂತ ಹಂತವಾಗಿ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಯುವ ಜನತೆ ದೈಹಿಕವಾಗಿ ಮಾನಸಿಕವಾಗಿ ಸದೃಢಹೊಂದಲು ಪೆಂಕಾಕ್ ಸಿಲತ್ ಸಹಕಾರಿ. ಇದು ಕರಾಟೆಯ ಒಂದು ವಿಧ, ಏಷಿಯನ್ ಮತ್ತು ಒಲಿಂಪಿಕ್ ಕ್ರೀಡೆಯಲ್ಲೂ ಮಾನ್ಯತೆ ಪಡೆದುಕೊಂಡಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಪೆಂಕಾಕ್ ಸಿಲತ್ ಮಾದರಿ ಕರಾಟೆ ವಿದ್ಯಾರ್ಥಿಗಳಿಗೆ ಏಷಿಯನ್ ಗೇಮ್ಸ್, ಬೀಚ್‌ಗೇಮ್ಸ್, ಏಷಿಯನ್ ಒಲಿಂಪಿಕ್‌ನಲ್ಲೂ ಭಾಗವಹಿಸುವ ಅವಕಾಶ ನೀಡುವುದನ್ನು ಪ್ರಮುಖವಾಗಿ ಇಟ್ಟಿಕೊಂಡು ರಾಜ್ಯಮಟ್ಟದ ಪಂದ್ಯ ಆಯೋಜಿಸಲಾಗಿದೆ ಎಂದು ಪೆಂಕಾಕ್ ಸಿಲತ್ ಸಂಸ್ಥೆ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಜಗದೀಶ್ ಹೇಳಿದರು.
2 ದಿನ ನಡೆಯುವ ಪಂದ್ಯಾವಳಿಯಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯಮಟ್ಟದಲ್ಲಿ ಸ್ಫರ್ಧಿಸಿ ವಿಜೇತರಾದ ಯುವಜನರು ಭಾಗವಹಿಸಲಿದ್ದಾರೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದ ಸಬ್ ಜೂನಿಯರ್ ಹಾಗೂ ಜೂನಿಯರ್‌ಗಳಿಗೆ ಪ್ರಮಾಣ ಪ್ರತ ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋವಿಡ್-19 ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದ ವೈದ್ಯರು, ಪೊಲೀಸರು, ಪೌರಕಾರ್ಮಿಕರಿಗೆ, ಆಶಾಕಾರ್ಯಕರ್ತೆಯರು, ಮಾಧ್ಯಮದವರು ಸೇರಿ 30ಕ್ಕೂ ಮಂದಿ ಕರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು.
ಪೆಂಕಾಕ್ ಸಿಲತ್ ಸಂಸ್ಥೆ ಗಂಗಾವತಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಹಂಚಿನಾಳ, ಶಿವಮೊಗ್ಗ ಮುಖ್ಯಕಾರ್ಯದರ್ಶಿ ಚಂದ್ರಕಾತ್‌ಭಟ್, ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಎಲ್.ಅನಿಲ್‌ಕುಮಾರ್, ಧಾರವಾಡ ಜಿಲ್ಲಾ ಕಾರ್ಯದರ್ಶಿ ಮೈತ್ರಾಬನ್ನಿಕೊಪ್ಪ, ರಾಯಚೂರು ಜಿಲ್ಲಾ ಕಾರ್ಯದರ್ಶಿ ಕೆ.ಲಕ್ಷ್ಮೀ, ಬಾಗಲಕೋಟೆ ಜಿಲ್ಲಾ ಕಾರ್ಯದರ್ಶಿ ವಾಸುಬಡೆಗೇರ, ಗ್ರಾಮಾಂತರ ಜಿಲ್ಲಾ ಸದಸ್ಯ ಜಿ.ಎಚ್.ಅನಿಲ್‌ಕುಮಾರ್ ಮತ್ತಿತರರು ಉಪಸ್ಥಿತರಿದರು.