ಜಿಲ್ಲೆ

ಪರಿಶ್ರಮ ಹಾಕಿದರೆ ಯಶಸ್ಸು ಖಂಡಿತ: ಸಿ.ಶಿಖಾ

ಮೈಸೂರು: ದೊಡ್ಡದಾಗಿ ಚಿಂತಿಸಿ, ದೊಡ್ಡ ಕನಸುಗಳೊಂದಿಗೆ ಪರಿಶ್ರಮ ಹಾಕಿದರೆ ಯಶಸ್ಸು ಖಂಡಿತ ಸಾಧ್ಯ ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಆಯುಕ್ತೆ ಸಿ.ಶಿಖಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ 15ನೇ ಪದವೀಧರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪದವೀಧರರ ದಿನಾಚರಣೆ ಮರೆಯಲಾಗದ ದಿನ. ಹಿಂದಿನ ನಿಮ್ಮ ಗುರಿ ಕನಸುಗಳು ಸಾಕಾರಗೊಂಡು ಮುಂದಿನ ಜೀವನದ ಗುರಿ ಮತ್ತು ಕನಸುಗಳನ್ನು ಕಾಣುವ ಕ್ಷಣವಿದು. ಈ ಸಂದರ್ಭದಿಂದಲೇ ನೀವು ದೊಡ್ಡದಾಗಿ ಚಿಂತಿಸಿ, ದೊಡ್ಡ ಕನಸುಗಳನ್ನೇ ಕಂಡು, ಅವುಗಳನ್ನು ನನಸು ಮಾಡಿಕೊಳ್ಳಲು ಪರಿಶ್ರಮದಿಂದ ದುಡಿಯಬೇಕು. ಈ ಮೂಲಕ ಸಾಧಕರಾಗಿ ಹೊರಹೊಮ್ಮಿ ಎಂದು ಆಶಿಸಿದರು.
ತಂತ್ರಜ್ಞಾನ ಇಂದು ತುಂಬಾ ಅಗತ್ಯವಾಗಿದ್ದು, ಇದರೊಂದಿಗೆ ವಿದ್ಯಾರ್ಥಿಗಳ ಒಡನಾಟ ಹೆಚ್ಚಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಇಂದು ವ್ಯಸನವಾಗಿದ್ದು, ಇದರಿಂದ ಅಂತರ ಕಾಯ್ದುಕೊಳ್ಳಬೇಕು. ಎಲ್ಲಕ್ಕಿಂತ ಮನುಷ್ಯನ ಮೆದುಳಿನ ಕಾರ್ಯಶಕ್ತಿಯೇ ಅತ್ಯುತ್ತಮವಾದದ್ದು. ಆದುದರಿಂದ ವಿದ್ಯಾರ್ಥಿಗಳು ಮೆದುಳನ್ನು ನಂಬಿ, ಮನೋಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ಸಾಮಾಜಿಕ ಜಾಲತಾಣಗಳನ್ನು ಎಷ್ಟು ಅಗತ್ಯವೋ ಅಷ್ಟು ಬಳಸಿ ಮತ್ತು ಅವುಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ ಎಂದರು.
ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ, ಹೊಸ ಅನ್ವೇಷಣೆಗಳ ಕಡೆ ಚಿಂತಿಸಿಸಬೇಕು. ನಕಾರಾತ್ಮಕವಾದ ಆಲೋಚನೆಯಿಂದ ದೂರವಿದ್ದು, ಸಕಾರಾತ್ಮಕವಾದ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ ಕೊಡಬಹುದಾದ ಅತ್ಯುತ್ತಮ ಕೊಡುಗೆಗಳ ಬಗ್ಗೆ ಸದಾ ಚಿಂತಿಸುತ್ತಿರಿ ಎಂದರು.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳಿಂದ ಒಟ್ಟು 1,054 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಹೆಚ್ಚು ಅಂಕ ಪಡೆದ ಒಟ್ಟು 65 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು. 10 ವಿದ್ಯಾರ್ಥಿಗಳು ವಿವಿಧ ದತ್ತಿ ಪುರಸ್ಕಾರ ಪಡೆದುಕೊಂಡರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅವರು ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ.ಬಿ.ವಿ.ಸಾಂಬಶಿವಯ್ಯ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್, ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಪ್ರಭುಸ್ವಾಮಿ, ಡಾ.ಎನ್.ರಾಜೇಂದ್ರ ಪ್ರಸಾದ್ ಇದ್ದರು.