ಗದಗ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ದೌರ್ಜನ್ಯಗಳು ನಡೆಯದಂತೆ ನಿಯಂತ್ರಿಸಬೇಕು. ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕಾಗಿ ನೀಡಿರುವ ಅನುದಾನ ಸದ್ಬಳಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶ್ಬಾಬು ಹೇಳಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ದೌರ್ಜನ್ಯ ನಿಯಂತ್ರಣ ಜಾಗೃತ ಸಮಿತಿ, ಎಸ್ಸಿಪಿ, ಟಿಎಸ್ಪಿ ಪ್ರಗತಿ ಪರಿಶೀಲನೆ ತ್ರೖೆಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ವರದಿಯಾಗದಂತೆ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯ ಮತ್ತು ಆರ್ಥಿಕ ಪರಿಹಾರ ಒದಗಿಸಬೇಕು. ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರೋಣ ತಾಲೂಕಿನ ಯಾವಗಲ್, ಮಾಳವಾಡ ಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ನಿವೇಶನ ಲಭ್ಯವಿದ್ದು, ಮುಗಳಿ ಗ್ರಾಮದಲ್ಲಿ ರುದ್ರಭೂಮಿಗಾಗಿ ಖಾಸಗಿಯವರಿಂದ ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಸರ್ಕಾರದ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಸನ್ ಬೋರ್ಡ್ಗಳನ್ನು ಅಳವಡಿಸಲು ಕ್ರಮ ವಹಿಸಬೇಕು. ಸ್ವಚ್ಛತಾ ಸಿಬ್ಬಂದಿಗೆ ಅವಶ್ಯವಿರುವ ಸುರಕ್ಷತಾ ಪರಿಕರ ವಿತರಿಸಬೇಕು. ಜಿಲ್ಲೆಯಲ್ಲಿ ಶೌಚಗೃಹ, ಒಳಚರಂಡಿ ಹಾಗೂ ತೆರೆದ ಗುಂಡಿ ಸೇರಿದಂತೆ ಯಾವುದೇ ಅನೈರ್ಮಲ್ಯ ಸ್ಥಳಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಜರುಗದಂತೆ ನೋಡಿಕೊಳ್ಳಬೇಕು. ಬದಲಾಗಿ ಯಂತ್ರೋಪಕರಣಗಳನ್ನು ಬಳಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ನಗರಸಭೆ ಯೋಜನಾಧಿಕಾರಿ ಎಸ್.ಎನ್.ರುದ್ರೇಶ್ ಮತ್ತಿತರರು ಇದ್ದರು.