ಚಾಮರಾಜನಗರ: ಪರಿಶಿಷ್ಟ ಪಂಗಡದ ಮನೆ ಇಲ್ಲದವರು, ಹೆದ್ದಾರಿಗಾಗಿ ಮನೆಗಳನ್ನೇ ಬಿಟ್ಟುಕೊಟ್ಟವರು, ಮನೆ ಮತ್ತು ನಿವೇಶನಗಳಿಗಾಗಿ ಅಳಲು ತೋಡಿಕೊಂಡರು. ಸತ್ತವರನ್ನು ಹೂಳಲು ಸ್ಮಶಾನವನ್ನು ಗುರುತಿಸುವಂತೆ ಮುಖಂಡರು ಬೇಡಿಕೆ ಸಲ್ಲಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಪರಿಶಿಷ್ಟ ಪಂಗಡದ ಹಲವು ಸಮುದಾಯಗಳ ಸಮಸ್ಯೆಗಳು ಈ ವಿಧದಲ್ಲಿ ಅನಾವರಣವಾಯಿತು.
ಮುಖಂಡ ವಿರಾಟ್ ಶಿವು ಮಾತನಾಡಿ, ನಗರದ ಮಧ್ಯೆಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಕ್ಕೆ ಒಳಪಟ್ಟ ನಾಯಕ ಸಮುದಾಯದ 100 ಜನರು ನಿವೇಶನ ಅಥವಾ ಸೂಕ್ತ ಪರಿಹಾರವಿಲ್ಲದೇ ಅತಂತ್ರವಾಗಿದ್ದಾರೆ. ಇದರಲ್ಲಿ ಅನೇಕರು ತುಂಬಾ ಬಡವರಾಗಿದ್ದು, ಇರಲು ಜಾಗವಿಲ್ಲದೇ ಹಲವಾರು ಕುಟುಂಬಗಳು ಊರನ್ನೇ ತೊರೆದಿದೆ. ನಾಯಕ ಸಮುದಾಯವೆಂದರೆ ಅಧಿಕಾರಿಗಳಿಗೆ ಅಸಡ್ಡೆ ಮನೋಭಾವ ಮೂಡುತ್ತದೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಯಾಕೇ ತಾತ್ಸಾರ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಸುರೇಶ್ ನಾಯಕ ಮಾತನಾಡಿ, ಭೂ ಸ್ವಾಧೀನಕ್ಕೆ ಒಳಪಟ್ಟ ಕೆಲವರಲ್ಲಿ ಮೂಲ ದಾಖಲಾತಿಗಳು ಇಲ್ಲ. ನ್ಯಾಯಾಲಯ ಕೇವಲ 10 ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದೆ. ಇನ್ನು 90 ಕುಟುಂಬಗಳು ಏನುಮಾಡಬೇಕು. 2017-18 ರಲ್ಲೇ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಉತ್ತುವಳ್ಳಿ ಗ್ರಾಮದಲ್ಲಿ ಗುರುತು ಮಾಡಿರುವ ನಿವೇಶನ ಸಮುದಾಯದವರಿಗೆ ಯೋಗ್ಯವಾದುದಲ್ಲ. ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆಗಾಗಿ ಬೇರೆ ಕಡೆ ಸೂಕ್ತವಾದ ಸ್ಥಳ ಗುರುತಿಸಿ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.
ಕಾಳನಹುಂಡಿ ಗ್ರಾಮದ ನಾಯಕ ಸಮುದಾಯಕ್ಕೆ ಸೇರಿದ ಸ್ಮಶಾನಕ್ಕೆ ಜಾಗವನ್ನು ಖಾತೆ ಮಾಡಿಕೊಡಬೇಕು. ಸ್ಮಶಾನವನ್ನು ಅಭಿವೃದ್ಧಿಗೊಳಿಸಿ, ಬೇರೆ ಜನಾಂಗದವರು ಸ್ಮಾಶಾನದಲ್ಲಿ ಗೋರಿ ಕಟ್ಟದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಕೊಳ್ಳೇಗಾಲ ಉಪನಿಭಾಗಾಧಿಕಾರಿ ಮಹೇಶ್, ನಗರಸಭಾ ಅಧ್ಯಕ್ಷ ಸುರೇಶ್ ನಾಯಕ್ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಉಪಸ್ಥಿತರಿದ್ದರು.