ಹಾಸನ: ಒಳಮೀಸಲಾತಿ ಜಾರಿಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೂಡಲೇ ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ಮತ್ತು ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಹೇಮಾವತಿ ಪ್ರತಿಮೆಯಿಂದ ಹೊರಟ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಒಕ್ಕೂಟದ ಮುಖಂಡ ಎಚ್.ಪಿ. ಶಂಕರರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅದೇ ರೀತಿ ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಳೆದ 30 ವರ್ಷಗಳಿಂದ ನಮ್ಮ ಬೇಡಿಕೆಯಾದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಗಾಗಿ ರಾಜ್ಯದಲ್ಲಿ ಹಲವಾರು ಹೋರಾಟಗಳು ನಡೆದಿವೆ. ಈ ವೇಳೆ ಹಲವು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ನಮ್ಮನ್ನಾಳುವ ಸರ್ಕಾರ ಇದುವರೆಗೂ ಒಳ ಮೀಸಲಾತಿ ಜಾರಿಗೊಳಿಸದೆ ಇರುವುದರಿಂದ ನಮ್ಮ ಸಂಘಟನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಇದರ ಪರಿಣಾಮ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳು ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಮಹತ್ವದ ಆದೇಶ ನೀಡಿತು. ಆದರೆ ನಮ್ಮ ಕರ್ನಾಟಕ ಸರ್ಕಾರ ಕೋರ್ಟ್ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಾ ಕಾಲತಳ್ಳುತ್ತಿರುವ ಕಾರಣ ಈ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಒಳ ಮೀಸಲಾತಿ ಜಾರಿಗೊಳಿಸಂತೆ ಒತ್ತಾಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಲೂರು ವೆಂಕಟಯ್ಯ, ಲೋಕೇಶ್, ಕೃಷ್ಣದಾಸ್, ಕೆ.ಪಿ. ಚಂದ್ರಯ್ಯ, ವೆಂಕಟಯ್ಯ, ಭಾಸ್ಕರ್, ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.