ಮೈಸೂರು: ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷಾ ಕಾರ್ಯದ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದರು.
ಸಮೀಕ್ಷಾ ಕಾರ್ಯದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಗಣತಿದಾರರಿಗೆ ಸೂಕ್ತ ತರಬೇತಿ ಕೊಟ್ಟಿಲ್ಲ. ದಿನವೊಂದಕ್ಕೆ 3-4 ಮನೆ ಸಮೀಕ್ಷೆ ಮಾಡುವುದೇ ಕಷ್ಟವಾಗಿದೆ. ಜನರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ. ಆದ್ದರಿಂದ ಮನೆ ಮನೆ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾವುದೇ ಲೋಪವಾಗದಂತೆ ಸಮೀಕ್ಷೆ ನಡೆಯಬೇಕು. ಆದರೆ, ವಿವಿಧ ಸಮಸ್ಯೆಗಳಿಂದ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ದೂರಿದರು. ಸಮೀಕ್ಷೆ ವೇಳೆ ಲೋಪದೋಷವಾದರೆ ಅಧಿಕಾರಿಗಳನ್ನು ಹೊಣೆ ಮಾಡಬೇಕು.
ರೇಷನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಕಾರ್ಡ್ ಬಳಸಬೇಕು. ಇವರೆಡು ಇಲ್ಲದವರ ಬಳಿ ಮತದಾರರ ಗುರುತಿನ ಚೀಟಿ ಪಡೆದು ಸಮೀಕ್ಷೆಗೆ ನೋಂದಾಯಿಸಿಕೊಳ್ಳಬೇಕು. ಆದರೆ, ಅಧಿಕಾರಿಗಳು ಈ ಕಾರ್ಯವನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬಲಗೈ ಸಮುದಾಯದ ಜನರು ಸಮೀಕ್ಷೆಯಲ್ಲಿ ಹೊಲೆಯ ಎಂದು ಬರೆಸಬೇಕು. ಅದಕ್ಕಾಗಿ ಯಾವುದೇ ಸಂಕೋಚಪಡಬಾರದು. ಯಾವುದೇ ಧರ್ಮಕ್ಕೆ ಪರಿವರ್ತನೆಯಾದವರೂ ತಮ್ಮ ಮೂಲ ಜಾತಿಯನ್ನು ಸಮೀಕ್ಷೆ ವೇಳೆ ನಮೂದಿಸಬೇಕು. ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೂಚನೆಯ ಮೇರೆಗೆ ಮೈಸೂರು ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ರುದ್ರಯ್ಯ ಮಾತನಾಡಿ, ಸಮೀಕ್ಷೆಗೆ ಗ್ರಾಮಾಂತರ ಪ್ರದೇಶದಲ್ಲಿ ತೊಂದರೆ ಇಲ್ಲ. ನಗರ ಪ್ರದೇಶದಲ್ಲಿ ಗೊಂದಲವಾಗುತ್ತಿದೆ. ಪರಿಶಿಷ್ಟ ಜಾತಿಯವರನ್ನು ಗುರುತಿಸುವುದು ಕಷ್ಟವಾಗಿದೆ.
ಎಡ-ಬಲ ಜಾತಿಗಳಲ್ಲಿ ವ್ಯತ್ಯಾಸವೇನಿಲ್ಲ. ಇಬ್ಬರೂ ಅಸ್ಪಶ್ಯರು. ಗಣತಿ ಮಾಡುವಾಗ ಕ್ರಮ ಬದ್ಧವಾಗಿರಬೇಕು ಎಂದು ಹೇಳಿದರು.
ಮುಖಂಡರಾದ ತುಂಬಲ ರಾಮಣ್ಣ, ಮಹೇಶ್, ಮಹೇಶ್, ಮಂಜು ಇದ್ದರು.