ಜಿಲ್ಲೆ

ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ : ಮಾದಿಗ ಎಂದು ನಮೂದಿಸಿ

ಮೈಸೂರು: ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಆಯೋಗದ ಶಿಫಾರಸಿನಂತೆ ಒಳ ಮೀಸಲಾತಿ ಕಲ್ಪಿಸಲು ಮೇ 5 ರಿಂದ ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ ನಡೆಯಲಿದ್ದು, ಯಾವುದೇ ಗೊಂದಲ, ಅಪಸ್ವರ ಇಲ್ಲದೆ ಜಾತಿಯ ಕಾಲಂನಲ್ಲಿ ಮಾದಿಗ ಎಂದು ನಮೂದಿಸುವಂತೆ ಸಮುದಾಯದ ಮುಖಂಡರು ಕೋರಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಮಾದಿಗ ಸಮುದಾಯದ ಮುಖಂಡರ ಮಹತ್ವದ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲಾಯಿತು.

ಪೌರಕಾರ್ಮಿಕರದ್ದು ಜಾತಿಯಲ್ಲ. ಅದೊಂದು ವೃತ್ತಿಯಾಗಿರುವ ಕಾರಣ ಕಮ್ಮಾರರು, ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರು ಮಾದಿಗರೇ ಆಗಿರುವ ಕಾರಣ ಸಮೀಕ್ಷೆಯ ವೇಳೆ ಮಾದಿಗ ಎನ್ನುವುದನ್ನು ಬರೆಸಬೇಕು.

ಒಂದು ವೇಳೆ ಸಮೀಕ್ಷೆಯಲ್ಲಿ ವ್ಯತ್ಯಾಸವಾದರೆ ಒಳ ಮೀಸಲಾತಿಯ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ, ಮೂರು ಹಂತಗಳಲ್ಲಿ ನಡೆಯುವ ಸಮೀಕ್ಷೆ ಸಂದರ್ಭದಲ್ಲಿ ಜವಾಬ್ದಾರಿಯನ್ನು ಅರಿತು ನಮೂದಿಸಬೇಕು ಎಂದು ಸಮುದಾಯದವರಿಗೆ ತಿಳಿಸಲಾಯಿತು

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಈ ಸಮೀಕ್ಷೆ ಮಾದಿಗ ಸಮುದಾಯಕ್ಕೆ ಅತ್ಯಂತ ಪ್ರಮುಖವಾಗಿದೆ. ಡಿ.ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ನೇರ ನೇಮಕಾತಿ ಮಾಡಿದ ಸಂದರ್ಭದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ನಾನು ನೇಮಕಾತಿಗೊಂಡಿದ್ದೆ.

ಅಂದು ನಾನೇ ಮೊದಲು ಮತ್ತು ನಾನೇ ಕೊನೆಯಾಗಿದ್ದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ ಒದಗಿತು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಒದಗಿಸಿದ್ದರೆ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ ಕೀರ್ತಿ ಹೊಂದಲಿದ್ದಾರೆ. ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಕಲ್ಪಿಸುವುದರಲ್ಲಿ ಹಿಂದೆ ಸರಿಯಲ್ಲ ಎಂದರು.

ಮುಂದಿನ ಭವಿಷ್ಯಕ್ಕಾಗಿ ಒಳ ಮೀಸಲಾತಿ ಅಗತ್ಯವಿದೆ. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದರಿಂದ ಮಾದಿಗ ಸಮುದಾಯದ ಕಣ್ತೆರೆಸುವಂತೆ ಮಾಡಿದೆ. ಸಮೀಕ್ಷೆಯ ವೇಳೆ ತಮ್ಮ ಮನೆಗಳಲ್ಲೇ ಎಲ್ಲರೂ ಹಾಜರಿದ್ದು ಸಮೀಕ್ಷೆಗೆ ಸಹಕಾರ ನೀಡಬೇಕು. ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಾದರೆ ಮೀಸಲಾತಿ ಪ್ರಮಾಣ ಜಾಸ್ತಿಯಾಗಲಿದೆ ಎಂದರು.

ಬಲಗೈನವರೊಂದಿಗೆ ಪೈಪೋಟಿ ಸಾಧ್ಯವಿಲ್ಲ:

ಮಾಜಿ ಮೇಯರ್ ನಾರಾಯಣ ಮಾತನಾಡಿ, ಆದಿ ದ್ರಾವಿಡ, ಆದಿ ಆಂಧ್ರದವರು ಕರ್ನಾಟಕದ ಮೂಲವಲ್ಲ. ಆದಿ ಕರ್ನಾಟಕದವರು ಕರ್ನಾಟಕದ ನೆಲೆಯವರು. ಎಚ್.ಎನ್.ನಾಗಮೋಹನ್ ದಾಸ್ ಒಳ ಮೀಸಲಾತಿ ಕಲ್ಪಿಸಲು ಕೆಲವು ಗೊಂದಲ ಇದೆ.

ಆದಿ ಆಂಧ್ರ, ಆದಿ ದ್ರಾವಿಡದಲ್ಲೂ ಮಾದಿಗ ಸೇರಿಕೊಂಡಿರುವ ಕಾರಣ ಮತ್ತೊಮ್ಮೆ ದತ್ತಾಂಶ ಸಂಗ್ರಹಣೆ ಮಾಡುವುದಕ್ಕೆ ಸಮಯ ಕೇಳಿಕೊಂಡಿದ್ದರು. ಅದರಂತೆ, ದತ್ತಾಂಶ ಸಂಗ್ರಹಣೆಗೆ ಸಮೀಕ್ಷೆ ನಡೆಯುತ್ತಿದೆ. ಇದರಿಂದಾಗಿ ಜಾತಿ ವರ್ಗೀಕರಣ ಮಾಡಲು ಸುಲಭವಾಗಲಿದೆ ಎಂದು ಹೇಳಿದರು.

ಪೌರಕಾರ್ಮಿಕರದ್ದು ವೃತ್ತಿ ಹೊರತು ಜಾತಿಯಲ್ಲ. ನಾವು-ನೀವು ಅಣ್ಣ ತಮ್ಮಂದಿರು ಆಗಿದ್ದೇವೆ. ಸಿಗುವ ಮೀಸಲಾತಿಯಲ್ಲಿ ನಾವು ಹಂಚಿಕೊಳ್ಳೋಣ.ಆದರೆ, ನಾವು ಬಲಗೈನವರೊಂದಿಗೆ ಸೇರಿಕೊಂಡು ಪೈಪೋಟಿ ನೀಡಲು ಸಾಧ್ಯವಿಲ್ಲ. ಅವರು ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ.

ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದುವರಿದಿದ್ದಾರೆ. ಮತ್ತೆ ನಾವು ಅವರೊಂದಿಗೆ ಸೇರಿಕೊಂಡರೆ ಕಷ್ಟವಾಗಲಿದೆ. ಆದ್ದರಿಂದ ನಾವೆಲ್ಲರೂ ಹಳೆಯದನ್ನು ಮರೆತು ಮಾದಿಗ ಬರೆಸೋಣ ಎಂದು ಕರೆ ನೀಡಿದರು.

ಜನಸಂಖ್ಯೆಯಲ್ಲಿ ಬಲಗೈನವರಿಗಿಂತ ಮಾದಿಗ ಸಮುದಾಯ ಹೆಚ್ಚಾಗಿದೆ. ಆದರೆ, ಸೌಲಭ್ಯ, ಅಭಿವೃದ್ಧಿಯಲ್ಲಿ ನಾವು ತೀರ ಹಿಂದುಳಿದಿದ್ದು, ಇದನ್ನು ತಪ್ಪಿಸಬೇಕಾದರೆ ನಮ್ಮ ಜನಸಂಖ್ಯೆ ಪ್ರಮಾಣವನ್ನು ಸರ್ಕಾರ ಅರಿಯಬೇಕಿದೆ ಎಂದರು.

ಮಾದಿಗ ಸಮಾಜದ ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಂದೇ ಎನ್ನುವಂತೆ ಭಾವಿಸಿಕೊಂಡು ಒಟ್ಟಾಗಿ ಸಾಗಬೇಕಿದೆ. ನಾಗನಗೌಡ, ಎಲ್.ಜಿ.ಹಾವನೂರು, ಎ.ಜೆ.ಸದಾಶಿವ, ಮಾಧುಸ್ವಾಮಿ ಆಯೋಗ ನೀಡಿದ ವರದಿಯಲ್ಲಿ ಮಾದಿಗ ಸಮುದಾಯ ಜನಸಂಖ್ಯೆಯಲ್ಲಿ ಹೆಚ್ಚಿದೆ. ಆದರೆ, ನಾವು ಹಿಂದುಳಿದಿದ್ದು, ಇದು ಜಾತಿ ಗಣತಿ ಅಲ್ಲ. ಪರಿಶಿಷ್ಟಜಾತಿಯಲ್ಲಿ ನಾವು ಯಾವ ಮಟ್ಟಿಗೆ ಹಿಂದುಳಿದಿದ್ದೇವೆ ಎಂಬುದನ್ನು ಬರೆಸಬೇಕು ಎಂದು ಸಲಹೆ ನೀಡಿದರು.

ಕೆಲವರು ಗೊಂದಲ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಬದಲಿಗೆ ಹೊಲೆಯ ಎನ್ನುವಂತೆ ಬರೆಸಲು ಕರೆ ಕೊಟ್ಟಿದ್ದಾರೆ. ನಾವು ಮಾದಿಗ ಎನ್ನುವಂತೆ ಬರೆಸಬೇಕು ಎಂದರು.

ವಿಚಾರವಾದಿ ಪ್ರೊ.ಎಚ್.ಗೋವಿಂದಯ್ಯ ಮಾತನಾಡಿ, ಒಳ ಮೀಸಲಾತಿ ಕಲ್ಪಿಸಲು ಸಮೀಕ್ಷೆ ನಡೆಸುತ್ತಿರುವ ಕಾರಣ ಯಾವುದೇ ಹಿಂಜರಿಕೆ ಇಲ್ಲದೆ ಮಾದಿಗ ಎಂದು ನಮೂದಿಸಬೇಕು. ಇದು ಮುಂದಿನ ತಲೆಮಾರಿನವರಿಗೆ ಅನುಕೂಲವಾಗಲಿದೆ ಎಂದರು.

ಮುಖಂಡರಾದ ಎಡತೊರೆ ನಿಂಗರಾಜು, ಆರ್. ನಾಗರಾಜು, ಮಣಿ, ಹನುಮೇಶ್, ಶ್ರೀನಿವಾಸ್, ಮಾರಯ್ಯ, ಚಿನ್ನಣ್ಣ, ಶ್ರೀನಿವಾಸಮೂರ್ತಿ, ವಕೀಲ ಎಂ.ಶಿವಪ್ರಸಾದ್ ಇನ್ನಿತರರು ಇದ್ದರು.

-------

*1, 2

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಪ್ರಮುಖರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿದರು. ನಾರಾಯಣ್, ಪ್ರೊ.ಎಚ್.ಗೋವಿಂದಯ್ಯ, ಶಿವಪ್ರಸಾದ್, ಅರಕಲವಾಡಿ ನಾಗೇಂದ್ರ, ಎಡತೊರೆ ನಿಂಗರಾಜು ಮತ್ತಿತರರು ಇದ್ದರು.