ಜಿಲ್ಲೆ

ಪರಿತ್ಯಕ್ತ ಮಕ್ಕಳ ಆಧಾರ್ ನೋಂದಣಿಗೆ ಸಾಥಿ ಅಭಿಯಾನ

ಚಿತ್ರದುರ್ಗ: ಪರಿತ್ಯಕ್ತ ಹಾಗೂ ಇನ್ನಿತರೆ ಕಾರಣಗಳಿಂದ ಹೊರಗುಳಿದ ಮಕ್ಕಳ ಆಧಾರ್ ನೋಂದಣಿಗೆ ‘ಸಾಥಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ, ಜಿಲ್ಲಾ ಮಟ್ಟದ ಸಾಥಿ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆ ಪ್ರಕಾರ, ತಂದೆ-ತಾಯಿ ಇಲ್ಲದ ಪರಿತ್ಯಕ್ತ ಹಾಗೂ ವಲಸೆ ಇತ್ಯಾದಿ ಇನ್ನಾವುದೇ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಿ, ಆಧಾರ್ ನೋಂದಣಿಗೆ ಅಭಿಯಾನ ನಡೆಯಲಿದೆ. ಪರಿತ್ಯಕ್ತ ಮಕ್ಕಳಿಗೆ ಕಾನೂನು ಗುರುತು ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಸಾಥಿ ಸಮಿತಿ ರಚಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕಾರ್ಮಿಕ, ಪೊಲೀಸ್, ಆರೋಗ್ಯ ಇಲಾಖೆಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪರಿತ್ಯಕ್ತ ಮಕ್ಕಳ ಸರ್ವೇ ನಡೆಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಮಟ್ಟದಲ್ಲಿ ಪರಿತ್ಯಕ್ತ ಮಕ್ಕಳ ಗುರುತಿಸುವಿಕೆಗೆ ಸಹಕರಿಸಬೇಕು. ತಹಸೀಲ್ದಾರ್‌ಗಳು ಮಕ್ಕಳ ಆಧಾರ್ ನೋಂದಣಿಗೆ ಶ್ರಮಿಸಬೇಕು. ಆಧಾರ್ ಜತೆಗೆ ಜನನ ದೃಢೀಕರಣ ಪತ್ರವೂ ಇಲ್ಲದಿದ್ದರೆ ಕಾನೂನು ಸೇವೆಗಳ ಪ್ರಾಧಿಕಾರದ ಗಮನಕ್ಕೆ ತಂದಲ್ಲಿ ಉಚಿತವಾಗಿ ಮಾಡಿಸಿಕೊಡಲಾಗುವುದು ಎಂದರು.

ಜೂ.26 ರೊಳಗೆ ಆಧಾರ್ ಇಲ್ಲದ ಮಕ್ಕಳನ್ನು ಗುರುತಿಸಿ, 27ರಿಂದ ಆಗಸ್ಟ್ 5 ರವರೆಗೆ ಆಧಾರ್ ನೋಂದಣಿ ಮಾಡಿಸಬೇಕು. ಆಗಸ್ಟ್ 9ಕ್ಕೆ ರಾಜ್ಯಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೋಂದಣಿ ಕುರಿತು ಹಾಗೂ ರಾಜ್ಯದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್‌ವಾಸುದೇವ, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್, ಡಿಡಿಪಿಐ ಎಂ.ಆರ್. ಮಂಜುನಾಥ, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಮಕ್ಕಳ ರಕ್ಷಣಾಧಿಕಾರಿ ಸಿ. ಸವಿತಾ, ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ, ಪ್ಯಾನಲ್ ವಕೀಲರುಗಳಾದ ಎಂ.ವಿ. ರುದ್ರಯ್ಯ, ಸಿ. ಪಾಲಯ್ಯ, ಅನಿಸ್‌ಫಾತಿಮಾ, ಬಿ. ಮಂಜುಳಾ ಇತರರು ಇದ್ದರು.