ಜಿಲ್ಲೆ

ಪರಾಜಿತ ಅಭ್ಯರ್ಥಿ ಭ್ರಷ್ಟಾಚಾರ ಬಯಲಿಗೆ ಬರಲಿದೆ

ಅರಕಲಗೂಡು: ನನ್ನ ವಿರುದ್ಧ ಪರ್ಸೆಂಟೇಜ್ ರಾಜಕಾರಣದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯ ಭ್ರಷ್ಟಾಚಾರ ಬಯಲಿಗೆ ಬರಲಿದೆ. ನಾನು ಬೇರೆಯವರಿಂದ ಪಾಠ ಕಲಿಯಬೇಕಿಲ್ಲ. ನನ್ನ ವ್ಯಕ್ತಿತ್ವ ಏನು ಎನ್ನುವುದು ಕ್ಷೇತ್ರದ ಜನತೆಗೆ ತಿಳಿದಿದೆ ಎಂದು ಶಾಸಕ ಎ.ಮಂಜು ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇವರ ವ್ಯವಹಾರಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಇದರಿಂದ ವಿಚಲಿತರಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಪಟ್ಟಣದ ಅಭಿವೃದ್ಧಿಗೆ ರೂಪಿಸಿರುವ ಮಾಸ್ಟರ್ ಪ್ಲಾನ್ 2041 ಕುರಿತು ಮಾಹಿತಿಯನ್ನು ನೀಡಿದ್ದೆ. ಯಾವುದೇ ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ. ಬೇರೆಯವರ ಮಾತಿಗೆ ಮರುಳಾಗಿ ಮೋಸ ಹೋಗ ಬೇಡಿ ಎಂದು ತಿಳಿಸಿದ್ದೆ. ನನ್ನ ಈ ಹೇಳಿಕೆಯಿಂದ ವಿಚಲಿತರಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ರಾಜಕೀಯವಾಗಿ ಬೆಳೆಯಬಹುದು ಎಂದು ತಿಳಿದುಕೊಂಡಿದ್ದಾರೆ. ಆದರೆ, ಕ್ಷೇತ್ರದಲ್ಲಿ ನಾನು ಹತ್ತು ಚುನಾವಣೆಗಳನ್ನು ಎದುರಿಸಿದ್ದೇನೆ. ನನ್ನ ಕ್ಷೇತ್ರದ ಮತದಾರರ ಮನಸ್ಥಿತಿ ಏನು ಎಂಬುದು ನನಗೆ ತಿಳಿದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಸಚಿವ ದಿ.ಕೆ.ಬಿ.ಮಲ್ಲಪ್ಪ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರ ವಿರುದ್ಧ ರಾಜಕಾರಣ ಮಾಡಿದ್ದೇನೆ. ಇಷ್ಟು ಕೀಳಮಟ್ಟದ ಅವಹೇಳನಕಾರಿ ಮಾತುಗಳನ್ನು ಯಾರು ಆಡಿರಲಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಮಾತ್ರ ರಾಜಕಾರಣ ಮಾಡುತ್ತಿದ್ದೆವು. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದರು.