ಸೇಡಂ: ಹಬ್ಬ, ಹರಿದಿನಗಳು ಮನುಷ್ಯನಲ್ಲಿನ ದ್ವೇಷವನ್ನು ದೂರ ಮಾಡಿ, ಪ್ರೀತಿ ಹಾಗೂ ವಿಶ್ವಾಸವನ್ನು ಮೂಡಿಸುತ್ತವೆ. ಪ್ರತಿಯೊಬ್ಬರೂ ವಿಶ್ವಾಸದಿಂದ ಬದುಕು ನಡೆಸುವುದುನ್ನು ರೂಢಿ ಮಾಡಿಕೊಳ್ಳಬೇಕು ಎಂದು ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ದೊಡ್ಡ ಅಗಸಿ-ಚೌರಸ್ತಾ ಹತ್ತಿರ ಶಿವಸೇನಾ ದಸರಾ ಉತ್ಸವ ಸಮಿತಿಯಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ 30ನೇ ದಸರಾ ಉತ್ಸವ ಹಾಗೂ ಲಕ್ಷದೀಪೋತ್ಸವ ಕರ‍್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಿ ಆಶೀರ್ವಚನ ನೀಡಿ, ತಾಯಿ ಶಾಂಭವಿ ವಿವಿಧ ಅವತಾರಗಳನ್ನು ತಾಳಿ ರಾಕ್ಷಸರನ್ನು ಸಂಹಾರ ಮಾಡಿದಂತೆ, ಮನುಷ್ಯರಾದ ನಾವು ನಮ್ಮೊಳಗಿನ ರಾಕ್ಷಸ ಗುಣಗಳನ್ನು ಸುಟ್ಟುಹಾಕಿ ಎಲ್ಲರೊಂದಿಗೆ ಪ್ರೀತಿ, ಪ್ರೇಮದಿಂದ ಬಾಳುವುದನ್ನು ಕಲಿಸಿಕೊಡುವುದೇ ನವರಾತ್ರಿಯಾಗಿದೆ ಎಂದರು.
ನವರಾತ್ರಿ ಹಿಂದುಗಳ ಪಾಲಿಗೆ ಶ್ರೇಷ್ಠ ಹಬ್ಬ. 9 ದಿನ ಶ್ರದ್ಧೆ ಮತ್ತು ಭಕ್ತಿಯಿಂದ ದೇವಿಯ ಆರಾಧನೆ ಮಾಡುತ್ತೇವೆ. ಒಬ್ಬರಿಗೊಬ್ಬರೂ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಎಲ್ಲರೊಂದಿಗೆ ಬೆರೆಯುವ ಹಬ್ಬ ಇದಾಗಿದೆ. ನಮ್ಮ ಪಾಲಿಗೆ ಶತ್ರುವಾಗಿದ್ದರೂ ಅವರ ಮನೆಗೆ ಹೋಗಿ ಬನ್ನಿ ಕೊಟ್ಟು ಶುಭ ಕೋರುವ ಕೆಲಸ ಎಲ್ಲರೂ ಮಾಡಬೇಕು. ಹಬ್ಬಗಳು ನಮ್ಮಲ್ಲಿನ ವೈಮನಸ್ಸನ್ನು ದೂರ ಮಾಡಿ, ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತವೆ ಎಂದು ತಿಳಿಸಿದರು.
ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಜಗದೇವಮ್ಮ ತಾಯಿ, ಉತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಜೀವಣಗಿ, ಪುರಸಭೆ ಸದಸ್ಯ ಸಂತೋಷ ತಳವಾರ, ಶಿವಾಜಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಭೀಮಾಶಂಕರ ಕೊಳ್ಳಿ ಇದ್ದರು.
ಸಾಧಕರಾದ ಹುಸೇನಪ್ಪ ಭೋವಿ, ಶಾಂತಕುಮಾರ ಚನ್ನಕ್ಕಿ, ಶೇಖರ ನಾಟೀಕಾರ, ಚಂದ್ರಶೇಖರ ಹೊಸಮನಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಶಿವಲೀಲಾ ಜೀವಣಗಿ, ಅನನ್ಯಾ ಪ್ರಾರ್ಥಿಸಿದರು. ಲಕ್ಷö್ಮಣ ಬೋವಿ ಸ್ವಾಗತಿಸಿದರು. ರಾಜಕುಮಾರ ಚನ್ನೀರ ನಿರೂಪಣೆ ಮಾಡಿ, ವಂದಿಸಿದರು.
ಝಗಮಗಿಸಿದ ಲಕ್ಷದೀಪ: ದಸರಾ ಉತ್ಸವ ಸಮಿತಿಯೂ 30ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಲಕ್ಷ ದೀಪೋತ್ಸವ ಕರ‍್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಸಾವಿರಾರು ಜನರು ವಿಶೇಷವಾಗಿ ಮಹಿಳೆಯರು, ಮಕ್ಕಳು ಭಾಗವಹಿಸಿ ದೀಪ ಹಚ್ಚುವ ಮೂಲಕ ಸಂಭ್ರಮಿಸಿದರು. ಚೌರಸ್ತ ಸಮೀಪದ ಮುಖ್ಯರಸ್ತೆಯುದ್ದಕ್ಕೂ ದೀಪಗಳ ಸಾಲು ನೋಡುಗರ ಕಣ್ಮನಸೆಳೆದವು.