ರಮೇಶ ಹಾರ್ಸಿಮನೆ ಸಿದ್ದಾಪುರ
ಕರೊನಾ ವೈರಸ್ ತಡೆಯುವುದಕ್ಕಾಗಿ ತಾಲೂಕಿನ ಮನಮನೆ ಗ್ರಾಮಾಭಿವೃದ್ಧಿ ಕಮಿಟಿ ವಿನೂತನ ಕ್ರಮ ಕೈಗೊಂಡಿದೆ. ಹೊರಗಡೆಯಿಂದ ಬಂದವರು ಮನೆಯಲ್ಲಿ ಇರದೇ ಹೊರಗಡೆ ಓಡಾಡುತ್ತಿದ್ದರೆ ಅವರಿಗೆ ದಂಡ ಹಾಕಲಾಗುವುದು ಹಾಗೂ ಹೊರಗಡೆ ಓಡಾಡುತ್ತಿದ್ದವರ ಕುರಿತು ಮಾಹಿತಿ ನೀಡಿದರೆ ಅವರಿಗೆ ಬಹುಮಾನ ನೀಡಲಾಗುವುದು ಎಂದು ಅದು ಘೊಷಿಸಿದೆ. ಈ ಮೂಲಕ ಊರಿನಲ್ಲಿ ಜಾಗೃತಿ ಮೂಡಿಸಲು ಕಮಿಟಿ ಮುಂದಾಗಿದೆ.
ದ್ವಿಚಕ್ರ ವಾಹನಕ್ಕೆ ಸಣ್ಣ ಧ್ವನಿವರ್ಧಕ ಕಟ್ಟಿಕೊಂಡು ಗ್ರಾಮದಲ್ಲಿ ಸಂಚರಿಸುತ್ತ ಸೋಮವಾರದಿಂದ ಜಾಗೃತಿ ಮೂಡಿಸುತ್ತಿದೆ. ಮನಮನೆ ಊರಿನ ಸಾಕಷ್ಟು ಜನರು ಉದ್ಯೋಗ ಅರಸಿ ಪರವೂರಿಗೆ ತೆರಳಿದ್ದಾರೆ. ಈಗ ಕರೊನಾ ಆತಂಕದಿಂದ ಊರಿಗೆ ಮರಳುತ್ತಿದ್ದಾರೆ. ಇದರಿಂದ ಊರಿನ ಜನತೆ ಭಯಭೀತರಾಗಿದ್ದಾರೆ. ಮುಖ್ಯವಾಗಿ ಬೆಂಗಳೂರಿನಿಂದ ಬಂದ ಜನತೆಯಿಂದ ಕರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ, ಬೆಂಗಳೂರಿನಿಂದ ಬಂದವರು ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನಲ್ಲಿರಬೇಕು. ಮನೆಯವರೊಂದಿಗೆ ಇದ್ದರೆ ಮನೆಯ ಎಲ್ಲ ಸದಸ್ಯರಿಗೂ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ಪ್ರತ್ಯೇಕವಾಗಿರಬೇಕು. ಬೇರೆ ಊರಿನಿಂದ ಬಂದ ಕೆಲವರು ಹೊರಗಡೆ ಓಡಾಡುತ್ತಿರುವುದರಿಂದ ಊರಿನ ಜನತೆ ಭಯಗೊಂಡಿದ್ದಾರೆ. ಹೀಗಾಗಿ ಕಮಿಟಿ ಮುಂಜಾಗ್ರತೆ ವಹಿಸಿದೆ.
ಈಗಾಗಲೇ ಮನಮನೆ ಹಾಗೂ ಸುತ್ತಮುತ್ತ ಕೃಷಿ ಕೆಲಸ ಚುರುಕಿನಿಂದ ನಡೆಯುತ್ತಿದೆ. ಬೆಂಗಳೂರು ಮತ್ತಿತರ ನಗರಗಳಿಂದ ಜನ ಮನೆಗೆ ಬಂದಿರುವುದರಿಂದ ಭತ್ತದ ನಾಟಿ ಕೆಲಸಕ್ಕೆ ಕೂಲಿಕಾರರು ಬರಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಊರಿನಿಂದ ಯಾರೂ ಪರ ಊರಿಗೆ ಹೋಗಬಾರದು. ಬೇರೆ ಊರಿನವರು ನಮ್ಮೂರಿಗೆ ಬರಬಾರದೆಂದು ಅಲಿಖಿತ ನಿರ್ಣಯ ಕಮಿಟಿಯವರದ್ದಾಗಿದೆ.
ಕಾನೂನುಬಾಹಿರ
ಮಂಗಳವಾರ ಗ್ರಾಮಕ್ಕೆ ಗ್ರಾಪಂ ಆಡಳಿತಾಧಿಕಾರಿ ಪ್ರಶಾಂತ ಜಿ.ಎಸ್. ಹಾಗೂ ಪಿಡಿಒ ಕಿರಣಕುಮಾರ ಜಿ.ಎಸ್ ಭೇಟಿ ನೀಡಿ ಕಮಿಟಿಯವರೊಂದಿಗೆ ರ್ಚಚಿಸಿದರು. ದಂಡ ಹಾಕುವುದು ಹಾಗೂ ಯಾವುದೇ ಅನುಮತಿ ಪಡೆಯದೇ ಘೊಷಣೆ ಮಾಡುವುದು ಸರಿಯಲ್ಲ ಎಂದು ತಿಳಿವಳಿಕೆ ನೀಡಿದರು. ಇದಕ್ಕೆ ಕಮಿಟಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ದಂಡ ಹಾಕುವುದು ನಮ್ಮ ಮುಖ್ಯ ಉದ್ದೇಶವಲ್ಲ. ಜನರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲೆಡೆ ಕರೊನಾ ವೈರಸ್ ಹರಡುತ್ತಿರುವುದರಿಂದ ಊರಿನ ಜನರಲ್ಲಿ ಅದರಲ್ಲೂ ಮುಖ್ಯವಾಗಿ ಹೊರಗಡೆಯಿಂದ ಬಂದವರ ಕುರಿತು ಎಚ್ಚರ ವಹಿಸಬೇಕೆನ್ನುವ ಉದ್ದೇಶದಿಂದ ದಂಡ ಹಾಕಲು ನಿರ್ಣಯಿಸಿದ್ದೇವೆ. ಆದರೆ, ವಾಸ್ತವದಲ್ಲಿ ಈವರೆಗೂ ಯಾರಿಗೂ ದಂಡ ಹಾಕಿಲ್ಲ. ಹೊರಗಡೆಯಿಂದ ಬಂದವರು ಕ್ವಾರಂಟೈನಲ್ಲಿದ್ದು, ಸಹಕರಿಸಬೇಕು ಎಂಬ ಉದ್ದೇಶ ನಮ್ಮದು. ನಮ್ಮೂರಿನಲ್ಲಿ ಮಾತ್ರವಲ್ಲ, ಎಲ್ಲ ಊರಿನಲ್ಲಿಯೂ ಜಾಗೃತಿ ಮೂಡಿದರೆ ಮಾತ್ರ ರೋಗ ನಿಯಂತ್ರಣ ಸಾಧ್ಯ.| ರಾಮಚಂದ್ರ ರಂಗಾ ನಾಯ್ಕ ಅಧ್ಯಕ್ಷ, ನಾಗರಾಜ ನಾಯ್ಕ ಕಾರ್ಯದರ್ಶಿ ಗ್ರಾಮಾಭಿವೃದ್ಧಿ ಕಮಿಟಿ