ಅಂಕೋಲಾ: ತಾಲೂಕಿನ ಅವರ್ಸಾದ ನಾಗರಾಜ ವಿಷ್ಣು ನಾಯ್ಕ ಮತ್ತು ಸಕಲಬೇಣಾದ ಪ್ರೇಮಾನಂದ ನಾಯ್ಕ ಕ್ಲಿನಿಕ್ ಮೇಲೆ ದಾಳಿ ನಡೆಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ನಿತಿನ್ ಹೊಸ್ಮೇಲ್ಕರ್ ಇಬ್ಬರಿಗೂ ನೋಟಿಸ್ ನೀಡಿದರು.
ನಾಗರಾಜ ವಿಷ್ಣು ನಾಯ್ಕ ಇವರ ಕ್ಲಿನಿಕ್ನಲ್ಲಿ ದಾಳಿ ಮಾಡಿದ ವೇಳೆ 10 ರೋಗಿಗಳು ಇದ್ದರು. ಇಲ್ಲಿ 1 ತಪಾಸಣೆ ಮಾಡುವ ಬೆಡ್, ರೋಗಿಗಳು ಅಲ್ಲಿ ವಸತಿ ಮಾಡಿ ಚಿಕಿತ್ಸೆ ಮುಂದುವರಿಸಲು 4 ಬೆಡ್ಗಳ, 1 ಹೆರಿಗೆ ಬೆಡ್ ಮತ್ತು ಪರವಾನಗಿ ಪಡೆದಿರಲಿಲ್ಲ.ಅಲೋಪಥಿ ಮೆಡಿಸನ್, ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪತ್ರ ಪಡೆದಿಲ್ಲ. ಕೆಪಿಎಂಇ ಕಾಯ್ದೆ ಅನ್ವಯ ನೋಂದಣಿ ಮಾಡಿಲ್ಲ. ಅಲ್ಲದೆ, ಹಲವು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಪರವಾನಗಿ ಇಲ್ಲದೆ ಕ್ಲಿನಿಕ್ ಮುಂದುವರಿಸುವಂತಿಲ್ಲ . ಒಂದು ವೇಳೆ ಸೂಚನೆ ಪಾಲಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಡಾ. ನಿತಿನ್ ಹೊಸ್ಮೇಲ್ಕರ ಎಚ್ಚರಿಕೆ ನೀಡಿದರು.
ನಾಗರಾಜ ನಾಯ್ಕ ಅವರ ಕ್ಲಿನಿಕ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ ಸಂಗ್ರಹ ಇಟ್ಟಿರುವುದರಿಂದ ಸ್ಥಳದಲ್ಲಿಯೇ ಕ್ಲಿನಿಕ್ ಲಾಕ್(ಸೀಜ್) ಮಾಡಲು ಆದೇಶಿಸಿದರು.
ಸಕಲಬೇಣಾದ ಪ್ರೇಮಾನಂದ ನಾಯ್ಕ ಇವರು ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ಅಲ್ಲಿ ಯಾವುದೇ ರೀತಿ ಕ್ಲಿನಿಕ್ ನಡೆಸುತ್ತಿರುವ ಕುರಿತು ಸಾಕ್ಷಿ ದೊರೆತಿಲ್ಲ. ಇವರಿಗೆ ಪರವಾನಗಿ ಪಡೆಯದೇ ಕ್ಲಿನಿಕ್ ಆರಂಭಿಸುವಂತಿಲ್ಲ ಎಂದು ನೋಟಿಸ್ನಲ್ಲಿ ಸೂಚಿಸಿದರು. ದಾಳಿ ನಡೆಸಿದ ಸಂದರ್ಭದಲ್ಲಿ ಕಿರಿಯ ಪುರುಷ ಆರೋಗ್ಯ ಸಹಾಯಕ ಹನುಮಂತಪ್ಪ, ಎಎಸ್ಐ ದುರ್ಗಾಪ್ಪ ಕಲಘಟಗಿ ಇದ್ದರು.
ತಾಲೂಕಿನಲ್ಲಿ ವೈದ್ಯರಾಗುವ ಅರ್ಹತೆ ಪಡೆದ 15 ಮಂದಿ ಕೆಪಿಎಂಇನಿಂದ ಪರವಾನಗಿ ಪಡೆಯದೆ ಆಸ್ಪತ್ರೆ ನಡೆಸುತ್ತಿದ್ದರು. ಮೇ 3ರಂದು ದಾಳಿ ನಡೆಸಿದ ಮಾಹಿತಿ ಆಧಾರದ ಮೇರೆಗೆ ಈಗಾಗಲೇ 9 ಮಂದಿ ಆನ್ಲೈನ್ಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.| ಡಾ. ನಿತಿನ್ ಹೊಸ್ಮೇಲ್ಕರ್ಅಂಕೋಲಾ ತಾಲೂಕು ಆರೋಗ್ಯಾಧಿಕಾರಿ