ಔರಾದ್: ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದರೆ ಅದು ಕಾನೂನಿನ ಅಡಿ ಅಪರಾಧವಾಗಿದೆ. ಹೀಗಾಗಿ ಪರವಾನಗಿ ಪಡೆದು ವಾಹನ ಚಲಾಯಿಸಬೇಕು ಎಂದು ಸಂತಪುರ ಠಾಣೆ ಪಿಎಸ್ಐ ಪ್ರಭಾಕರ ಪಾಟೀಲ್ ಹೇಳಿದರು.
ತಾಲೂಕಿನ ಜಂಬಗಿ ಗ್ರಾಮದಲ್ಲಿ ಇತ್ತೀಚೆಗೆ ಸಂತಪುರ ಠಾಣೆಯಿಂದ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಪರಾಧ ತಡೆ ಕೇವಲ ಪೊಲೀಸರ ಜವಾಬ್ದಾರಿ ಅಲ್ಲ. ಸಾರ್ವಜನಿಕರು ಸಹಕಾರ ನೀಡಿದರೆ ಅಪರಾಧವನ್ನು ನಿಯಂತ್ರಣಕ್ಕೆ ತರಬಹುದು ಎಂದರು.
ಔರಾದ್ ಪಿಎಸ್ಐ ಜಗದೀಶ ನಾಯಕ್ ಮಾತನಾಡಿ, ಯುವಕರು ಅಪರಾಧಗಳಿಂದ ದೂರ ಉಳಿಯುವ ಜತೆಗೆ ಅಪರಾಧ ಎಸಗುವವರ ಕುರಿತು ಮಾಹಿತಿ ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪಿಎಸ್ಐ ಸುವರ್ಣಾ, ಮಂಜುನಾಥರೆಡ್ಡಿ, ರಮೇಶ ಟೋಕ್ರೆ, ಅಶೋಕ ನಿಡೋದೆ, ಅಹ್ಮದ್ ಜಂಬಗಿ ಇತರರಿದ್ದರು. ತಾಲೂಕಿನ ಗಣೇಶಪೂರ ಗ್ರಾಮದಲ್ಲೂ ಇತ್ತೀಚೆಗೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಜರುಗಿತು.