ಜಿಲ್ಲೆ

ಪರವಾನಗಿ ಇಲ್ಲದ ಗಣಿಗಾರಿಕೆ ನಿಲ್ಲಿಸಿ

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕಲ್ಲು ಗುತ್ತಿಗೆ ಮತ್ತು ಕ್ರಷರ್ ಮಾಲೀಕರಿಗೆ ಅಕ್ರಮ ಸಾಗಣೆ ಮತ್ತು ಸ್ಫೋಟಕ ದಾಸ್ತಾನಿಗೆ ಅವಕಾಶ ನೀಡದೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ಗಣಿ ಮಾಲೀಕರ ಸಭೆಯಲ್ಲಿ ಕಲ್ಲು ಗಣಿಗಾರಿಕೆ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಲಹೆ ಸೂಚನೆಗಳನ್ನು ನೀಡಿದರು.ಜಿಲ್ಲೆಯಲ್ಲಿ ಅಕ್ರಮ ಕ್ವಾರಿ, ಗಣಿಗಾರಿಕೆ ನಡೆಯಬಾರದು. ಗಣಿಗಾರಿಕೆಗೆಂದು ಅಕ್ರಮವಾಗಿ ಸ್ಫೋಟಕಗಳ ದಾಸ್ತಾನು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಎ್ಐಆರ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ಗಣಿಗಾರಿಕೆಗೆ ಮತ್ತು ಸ್ಫೋಟಕಗಳ ದಾಸ್ತಾನಿಗೆ ಅವಕಾಶ ಇಲ್ಲ. ಒಂದು ವೇಳೆ ಮಾಲೀಕರು ಯಾರಿಗೂ ಗೊತ್ತಾಗದೆ ಬಚ್ಚಿಟ್ಟುಕೊಂಡಿದ್ದರೆ ಜಿಲೆಟಿನ್ ಕಡ್ಡಿ, ಡಿಟೋನೆಟರ್ ಸೇರಿ ಸ್ಫೋಟಕ ವಸ್ತುಗಳನ್ನು ಪೊಲೀಸ್ ಇಲಾಖೆಯ ವಶಕ್ಕೆ ಒಪ್ಪಿಸಬೇಕು. ಪರವಾನಗಿ ಪಡೆದುಕೊಂಡ ಸ್ಥಳ ಬಿಟ್ಟು ಬೇರೆ ಕಡೆ ಗಣಿಗಾರಿಕೆ ನಡೆಸುತ್ತಿದ್ದರೆ ಕೂಡಲೇ ನಿಲ್ಲಿಸಬೇಕು ಎಂದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿ ನಂಜುಂಡಸ್ವಾಮಿ, ಡಿವೈಎಸ್ಪಿ ರವಿಶಂಕರ್ ಮತ್ತಿತರರು ಇದ್ದರು.

ಕಟ್ಟು ನಿಟ್ಟಿನ ಸೂಚನೆಗೆ ತಬ್ಬಿಬ್ಬು : ಹಿರೇನಾಗವಲ್ಲಿ ಸ್ಫೋಟ ದುರ್ಘಟನೆಯ ಬಳಿಕ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಸೂಚನೆಗೆ ಸಭೆಯಲ್ಲಿ ಭಾಗವಹಿಸಿದ್ದ ಹಲವು ಗಣಿ ಮಾಲೀಕರು, ನಿಯಮಗಳ ಹೆಸರಿನಲ್ಲಿ ಅಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಲ್ಲು ಗಣಿಗಾರಿಕೆಗೆ ಪರವಾನಗಿ, ಗಣಿಗಾರಿಕೆ ಮತ್ತು ಸಾಗಣೆ, ಸಿಬ್ಬಂದಿ ನಿರ್ವಹಣೆಗೆ ಕೋಟ್ಯಂತರ ರೂ.ಬಂಡವಾಳ ಹೂಡಲಾಗಿದೆ. ಆದರೆ, ಇಲ್ಲಿ ಪ್ರತಿಯೊಂದು ಕಡೆಯೂ ಕಿರುಕುಳ ಹೆಚ್ಚು. ಒಂದು ಕಡೆ ಕೆಲಸ ಬಿಡುವುದಕ್ಕೂ, ಮಾಡುವುದಕ್ಕೂ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.ಕಟ್ಟು ನಿಟ್ಟಿನ ಕ್ರಮಗಳ ಜಾರಿ ಒಳ್ಳೆಯದು. ಆದರೆ, ಇದನ್ನು ಮುಂದಿಟ್ಟುಕೊಂಡು ಕಿರುಕುಳ ನೀಡುವುದು ಸರಿಯಲ್ಲ. ಪ್ರಾಮಾಣಿಕ ಆಡಳಿತ ವ್ಯವಸ್ಥೆಯಿದ್ದಾಗ ಕೆಲಸವೂ ಸರಿಯಾಗಿ ನಡೆಯುತ್ತದೆ ಎಂದರು.

ಎಸಿ ವಿವಿಧೆಡೆ ಭೇಟಿ : ತಾಲೂಕಿನ ವಿವಿಧ ಕಲ್ಲು ಗಣಿಗಾರಿಕೆ ಕೇಂದ್ರಗಳಿಗೆ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ನೇತೃತ್ವದ ತಂಡವು ಸೋಮವಾರ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು. ಹಿರೇನಾಗವಲ್ಲಿ, ಮುದ್ದೇನಹಳ್ಳಿ ಸೇರಿ ವಿವಿಧೆಡೆ ಕಲ್ಲು ಕ್ವಾರಿಗಳಿಗೆ ತೆರಳಿ, ಗಣಿ ಮಾಲೀಕರಿಂದ ಮಾಹಿತಿ ಸಂಗ್ರಹಿಸಲಾಯಿತು. ಸಲಹೆ ಸೂಚನೆಗಳನ್ನೂ ನೀಡಲಾಯಿತು.