ಭೀಮನಕಟ್ಟೆ ಮರುಳು ದಂಡೆ ಬಳಿ ತುಂಗಾನದಿಯಲ್ಲಿ ಮುಳುಗಿದ ಯುವಕರಿಗಾಗಿ ಹುಡುಕಾಟ ನಡೆಸುತ್ತಿರುವ ಆಗ್ನಿಶಾಮಕದಳದ ಸದಸ್ಯರು ಮತ್ತು ಸಾರ್ವಜನಿಕರು.  
ಜಿಲ್ಲೆ

ಪ್ರವಾಸಕ್ಕೆ ಬಂದವರು ತುಂಗೆ ಪಾಲು

ತೀರ್ಥಹಳ್ಳಿ: ಬೆಂಗಳೂರಿನಿಂದ ತೀರ್ಥಹಳ್ಳಿಗೆ ಪ್ರವಾಸ ಬಂದಿದ್ದ ಮೂವರು ಯುವಕರಲ್ಲಿ ಇಬ್ಬರು ಭಾನುವಾರ ಮಧ್ಯಾಹ್ನ ಭೀಮನಕಟ್ಟೆ ಮರಳು ದಂಡೆಯ ಬಳಿ ತುಂಗಾ ನದಿಯಲ್ಲಿ ಈಜುವ ವೇಳೆ ಮುಳುಗಿದ್ದಾರೆ.
ಬೆಂಗಳೂರು ಮಾಗಡಿ ರಸ್ತೆಯ ಗೌತಮ್(27) ಮತ್ತು 8ನೇ ಮೈಲಿಕಲ್ಲು ನಿವಾಸಿ ಸಂಜಯ್ (25) ಮೃತ ದುರ್ದೈವಿಗಳು. ಇನ್ನೋರ್ವ ನೆಲಮಂಗಲ ಸಮೀಪದ ಲಕ್ಕನಹಳ್ಳಿಯ ಗಿರೀಶ್ ಜತೆಯಲ್ಲಿ ಬಂದವನು. ಅಗ್ನಿಶಾಮಕದಳದವರು ಹಾಗೂ ಸಾರ್ವಜನಿಕರು ಹುಡುಕಾಟ ನಡೆಸಿದ್ದು ಯುವಕರು ಮುಳುಗಿದ ಜಾಗ ಆಳವಾಗಿದ್ದು ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿರುವುದರಿಂದ ಭಾನುವಾರ ಸಂಜೆಯವರೆಗೂ ಸುಳಿವು ದೊರೆತಿರಲಿಲ್ಲ.
ಈ ಮೂವರೂ ಯುವಕರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದು ವಾರಾಂತ್ಯದ ರಜೆ ಕಳೆಯುವ ಸಲುವಾಗಿ ಸಂಜಯ್‌ನ ಮಾರುತಿ ಆಲ್ಟೋ ಕಾರಿನಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ತೀರ್ಥಹಳ್ಳಿಗೆ ಬಂದಿದ್ದರು. ಶನಿವಾರ ಕುಪ್ಪಳಿ ಹಾಗೂ ಭೀಮನಕಟ್ಟೆ ಸಮೀಪದ ತೂಗುಸೇತುವೆ ಮುಂತಾದೆಡೆ ಸುತ್ತಿ ಶನಿವಾರ ರಾತ್ರಿ ಕಮ್ಮರಡಿಯಲ್ಲಿ ತಂಗಿದ್ದರು. ಸಂಜಯ್ ಹಾಗೂ ಗಿರೀಶ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.