ಬಸವಕಲ್ಯಾಣ ತಾಲೂಕಿನ ಯಲದಗುಂಡಿ ಗ್ರಾಮದ ಶ್ರೀ ಪರಮೇಶ್ವರ ಜಾತ್ರೆ ನಿಮಿತ್ತ ಸೋಮವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯನ್ನು ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ, ಶಾಸಕ ಶರಣು ಸಲಗರ, ಬಾಬುಹೊನ್ನಾ ನಾಯಕ, ಬಸವರಾಜ ಪಂಡಿತ, ಮಲ್ಲಿಕಾರ್ಜುನ ಗುಂಗೆ, ಮಲ್ಲಿನಾಥ ಹಿರೇಮಠ, ಶಿವಕುಮಾರ ಶೆಟಗಾರ ಇತರರಿದ್ದರು. 
ಜಿಲ್ಲೆ

ಪರಮೇಶ್ವರನ ಪ್ರವಾಸಿ ತಾಣ ಈ ಜಗತ್ತು

ಬಸವಕಲ್ಯಾಣ: ಸೃಷ್ಟಿಕರ್ತ ಪರಮೇಶ್ವರನ ಪ್ರವಾಸಿ ತಾಣ ಈ ಜಗತ್ತು. ನಾವೆಲ್ಲರೂ ಕೆಲ ದಿನಗಳವರೆಗೆ ಇಲ್ಲಿಯ ಸೌಂದರ್ಯವನ್ನು ಅನುಭವಿಸಿ ಮತ್ತೆ ಹಿಂತಿರುಗಲು ಬಂದ ಪ್ರವಾಸಿಗರು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಯಲದಗುಂಡಿ ಗ್ರಾಮದ ಶ್ರೀ ಪರಮೇಶ್ವರ ಜಾತ್ರೆಯ ನಿಮಿತ್ತ ಸೋಮವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯ ಭವಚಕ್ರದಲ್ಲಿ ಸಿಲುಕಿ ನರಳದೆ, ಸುಖ ಯಾತ್ರಿಕನಾಗಿ ಜೀವನ ಪಯಣ ಸಾಗಿಸಲು ಭಗವದ್ ದರ್ಶನ ಪಡೆಯಲು ನಿತ್ಯ ಸಂತುಷ್ಟನಾಗಿರುವಂತಹ ಕುಶಲ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದೇವನ ಅದ್ಭುತ ಚಿತ್ತಾರವನ್ನು ಕಂಡು ಆನಂದಿಸಬೇಕೆ ವಿನಃ ತನ್ನದಾಗಬೇಕೆಂಬ ಹಪಾಹಪಿತನ ಇರಬಾರದು. ದೇವರ ಛತ್ರ ಮುಂದಿನ ಪೀಳಿಗೆಗೆ ವ್ಯವಸ್ಥಿತವಾಗಿ ಬಿಟ್ಟು ಹೋಗಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವುದು ಮರೆಯಬಾರದು ಎಂದರು.

ಶಾಸಕ ಶರಣು ಸಲಗರ ಮಾತನಾಡಿ, ಜಾತ್ರೆಗಳು ಮಾಡುವುದರ ಜತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ಕೊಡುವುದು ಅವಶ್ಯಕವಾಗಿದೆ. ಜಾತ್ರೆಗಳಲ್ಲಿ ಸಾಮಾಜಿಕ ನಾಟಕಗಳ ಜತೆಗೆ ಧಾರ್ಮಿಕ ಹಾಗೂ ನೀತಿ ಪ್ರದಾನವಾದ ನಾಟಕ ಮಾಡುವುದರಿಂದ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಬಹುದು ಎಂದು ಹೇಳಿದರು.

ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಮುಖಂಡರಾದ ಶಿವಕುಮಾರ ಸೆಟಗಾರ, ಹುಮನಾಬಾದ್ ಪಿಎಸ್‌ಐ ಸುರೇಶ ಚವ್ಹಾಣ್ ಮಾತನಾಡಿದರು.

ಮುಖಂಡ ಬಾಬುಹೊನ್ನಾ ನಾಯಕ, ಬಸ್ವತತ್ವ ಪ್ರಚಾರಕ ಬಸವರಾಜ ಪಂಡಿತ, ಶಿಕ್ಷಕ ಮಲ್ಲಿನಾಥ ಹಿರೇಮಠ, ಪ್ರಮುಖರಾದ ಸಂಜುಕುಮಾರ ಸುಗುರೆ, ಸಂತೋಷ ಪಾಟೀಲ, ಸಿದ್ರಾಮಪ್ಪ ಗುದಗೆ, ಸಿದ್ರಾಮಪ್ಪ ಕವಳೆ, ರತಿಕಾಂತ ಕೊಹಿನೂರ, ಸದಾನಂದ ಪಾಟೀಲ, ನಾಗೇಶ ಮಹಾಜನ ಇತರರಿದ್ದರು. ಮಲ್ಲಪ್ಪ ಕೋಟೆ ಸ್ವಾಗತಿಸಿ, ನಿರೂಪಣೆ ಮಾಡಿದರು.