ಜಿಲ್ಲೆ

ಪರದೆಯ ಮೇಲೆ ಭಾವ ಬಿಂಬವೇ ಚಿತ್ರಕಲೆ

ವಿರಾಜಪೇಟೆ: ಮನಸ್ಸು, ಸಂಬಂಧಗಳು ಕಡಿದುಕೊಂಡರೂ ಪರದೆಯ ಮೇಲೆ ವ್ಯಕ್ತವಾಗುವ ಚಿತ್ರಕಲೆ ಸಂಬಂಧಗಳನ್ನು ಒಂದುಗೂಡಿಸುವಂತೆ ಭಾಸವಾಗುತ್ತದೆ, ಇದು ಚಿತ್ರಕಲೆಗಿರುವ ಶಕ್ತಿ ಎಂದು ವಿರಾಜಪೇಟೆ ತಹಸೀಲ್ದಾರ್ ರಾಮಚಂದ್ರ ಅಭಿಪ್ರಾಯಪಟ್ಟರು.

ಸಾಧಿಕ್ ಆರ್ಟ್ ಲಿಂಕ್ಸ್ ವಿರಾಜಪೇಟೆ ವತಿಯಿಂದ ನಡೆಸಲಾಗುವ ಕಲಾ ಉತ್ಸವ ಕೊಡಗು-2024ರ ತಿಂಗಳ ಚಿತ್ರಕಲಾ ಪ್ರದರ್ಶನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಗರದ ಶಾನಭಾಗ್ ಕಟ್ಟಡದ ಆವರಣದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿ ಕಲಾ ಉತ್ಸವ ಕೊಡಗು-2024ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ರಾಮಚಂದ್ರ, ವ್ಯಕ್ತಿ ಅಥವಾ ಚಿತ್ರಕಲಾವಿದನು ತನ್ನ ಮನದೊಳಗಿರುವ ಆಗಾಧವಾದ ಭಾವನೆಗಳನ್ನು ಪರದೆಯ ಮೇಲೆ ಬಿಂಬಿಸಿ ವ್ಯಕ್ತಪಡಿಸುತ್ತಾನೆ. ಎಲ್ಲ ವ್ಯಕ್ತಿಗಳಲ್ಲಿ ಕಲೆ ಎಂಬುದು ಸುಪ್ತವಾಗಿದ್ದು ಹೊರಹೊಮ್ಮಲು ವೇದಿಕೆ ಕಲ್ಪಿಸಬೇಕು, ಅಲ್ಲದೆ ಪ್ರೋತ್ಸಾಹ ನೀಡಬೇಕು. ಕಲಾವಿದರು ಸೃಷ್ಟಿ ಮಾಡುವ ಚಿತ್ರಕಲೆಗಳನ್ನು ಪ್ರದರ್ಶನದ ಮೂಲಕ ವಿಶ್ವಕ್ಕೆ ಪರಿಚಯಿಸಬೇಕು ಈ ನಿಟ್ಟನಲ್ಲಿ ಚಿತ್ರಕಲಾವಿದರಾದ ಸಾಧಿಕ್ ಹಂಸ ಅವರ ಕಲಾ ಉತ್ಸವ ಕೊಡಗು ಶಿಬಿರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಶಾನ್‌ಭಾಗ್ ಕಟ್ಟಡದ ಮಾಲೀಕ, ಹಿರಿಯ ವಕೀಲ ಎಸ್.ಅರ್.ಜಗದೀಶ್ ಮಾತನಾಡಿ, ಸಮಾಜದಲ್ಲಿ ಮನುಜ ಮತ್ತು ಪ್ರಾಣಿಗಳ ಮಧ್ಯೆ ಹಲವಾರು ರೀತಿಯ ಸಂಬಂಧಗಳು ಸೃಷ್ಟಿಯಾಗುತ್ತವೆ. ಮರಣದ ಬಳಿಕ ಸಂಬಂಧಗಳು ಅಂತ್ಯವಾಗುತ್ತವೆ. ಅದರೆ ಚಿತ್ರಕಲಾವಿದನೊಬ್ಬ ಬಿಡಿಸುವ ಚಿತ್ರಗಳು ಸಂಬಂಧಗಳಿಗೆ ಶಾಶ್ವತ ರೂಪ ಕಾಣಿಸುತ್ತಾನೆ. ಹುಟ್ಟಿದ ಎಲ್ಲ ವ್ಯಕ್ತಿಗಳು ಇಂಜಿನಿಯರ್, ಡಾಕ್ಟರ್, ಲಾಯರ್ ಆಗಬೇಕು ಎಂದು ಬಯಸುವುದು ಸಹಜ. ಆದರೆ ವಿವಿಧ ಕಾರಣಗಳಿಂದ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ಹುಟ್ಟಿನಿಂದಲೇ ವ್ಯಕ್ತಿಗಳಿಗೆ ವರವಾಗಿ ಕರುಣಿಸಿದ ಕಲೆಯು ಜೀವನದ ಅಂತ್ಯದವರೆಗೆ ನೆಲೆ ನಿಲ್ಲುತ್ತದೆ ಎಂದರು.

ಡಾ.ಫಾತಿಮಾ ಕಾರ್ಯಪ್ಪ ಮಾತನಾಡಿ, ಚಿತ್ರಕಲಾವಿದರ ಕಲೆಯನ್ನು ಪ್ರದರ್ಶನ ಮಾಡಲು ಗ್ಯಾಲರಿ ನಿರ್ಮಾಣವಾಗಬೇಕು. ಇದರಿಂದ ಅಂತರಂಗದಲ್ಲಿರುವ ಕಲೆಯು ಸಾರ್ವಜನಿಕರ ಮುಂದೆ ಪ್ರದರ್ಶನವಾಗುತ್ತದೆ. ಚಿತ್ರಕಲೆಯಲ್ಲಿ ವಿವಿಧ ಪ್ರಕಾರಗಳಿವೆ. ನೈಪುಣ್ಯತೆಯಿಂದ ಕಲೆಯನ್ನು ಕಲಿತಲ್ಲಿ ಗಳಿಕೆಯನ್ನು ತನ್ನದಾಗಿಸಿಕೊಳ್ಳಬಹುದು ಎಂದು ಹೇಳಿದರು.

ಚಿತ್ರಕಲಾ ಪ್ರದರ್ಶನದ ಆಯೋಜಕ ಸಾಧಿಕ್ ಹಂಸ ಮಾತನಾಡಿ, ಚಿತ್ರಕಲೆ ಪ್ರದರ್ಶನವು ಒಂದು ತಿಂಗಳ ಕಾಲ ನಡೆಯಲಿದೆ. ಪ್ರದರ್ಶನದಲ್ಲಿ ಕೊಡಗು ಜಿಲ್ಲೆಯ ಹೆಸರಾಂತ ಕಲಾವಿದರಾದ ದಿವಂಗತ ಆಶಾ ಮಂದಪ್ಪ, ಬಿ.ಆರ್.ಸತೀಶ್, ದರ್ಶನ್ ಸುಬ್ಬಯ್ಯ, ವಿಠಲ್ ಸೋಮಯ್ಯ, ಸುನದ್ ಭಾರದ್ವಾಜ್, ಸೋಹನ್ ಗೊಣಿಕೊಪ್ಪಲು, ಕೆ.ಆರ್.ಮಂಜುನಾಥ್ ಮಡಿಕೇರಿ, ಹಾಸನ ಚಂದ್ರಶೇಖರ್ ನಾಯರ್, ಪ್ರವೀಣ್ ವರ್ಣಕುಠೀರ ಮಂಗಳೂರು, ಹಾಗೂ ಕೇರಳ ರಾಜ್ಯದ ನಂದನ್ ಕಣ್ಣೂರು, ಪ್ರಕಾಶನ್ ಕನ್ನಲೇರಿ, ಉಪಾಸನ ಕಣ್ಣೂರು ಮೊದಲಾದ ಹೆಸರಾಂತ ಚಿತ್ರಕಲಾವಿದರ ಚಿತ್ರಕಲೆಗಳು ಶಿಬಿರದಲ್ಲಿ ಪ್ರದರ್ಶನವಾಗಲಿವೆ ಎಂದು ತಿಳಿಸಿದರು.

ಕಲಾ ಉತ್ಸವ ಕೊಡಗು-2024ರ ಅಯೋಜಕರು, ಚಿತ್ರಕಲಾವಿದರು, ಸಾರ್ವಜನಿಕರು ಹಾಜರಿದ್ದರು.