ಮೈಸೂರು: ಪೂರ್ಣಯ್ಯ ನಾಲೆ ಉಳಿದರಷ್ಟೇ ಕುಕ್ಕರಹಳ್ಳಿ ಕೆರೆ ಜೀವಂತವಾಗಿರುತ್ತದೆ. ಉಭಯ ಜಲಮೂಲಗಳ ಸಂರಕ್ಷಣೆಯಲ್ಲಿ ಮೈಸೂರಿನ ಪರಿಸರ ಕಾಪಾಡುವಿಕೆ ಅಡಗಿದೆ. ಈ ಸರಪಳಿಗೆ ಹಾನಿಯಾದರೆ ಸ್ಥಳೀಯರು ಭವಿಷ್ಯದಲ್ಲಿ ವಿವಿಧ ವೈಪರೀತ್ಯ ಅನುಭವಿಸಬೇಕಾಗುತ್ತದೆ…!
ಇದು ವಿಷಯ ತಜ್ಞರ ಅಭಿಪ್ರಾಯ, ಎಚ್ಚರಿಕೆಯ ನುಡಿ. ‘ಕುಕ್ಕರಹಳ್ಳಿ ಕೆರೆಗೆ ನೀರು; ಪೂರ್ಣಯ್ಯ ನಾಲೆ ರಾಜಕಾಲುವೆಯ ಪುನಃಶ್ಚೇತನ; ಇಂದಿನ ಪರಿಸ್ಥಿತಿ ಮತ್ತು ಮುಂದಿನ ಅವಕಾಶ’ ಕುರಿತ ಕಾರ್ಯಾಗಾರದಲ್ಲಿ ವ್ಯಕ್ತವಾದ ಒತ್ತಾಸೆಯೂ ಹೌದು.
ಮೈಸೂರು ವಿಶ್ವವಿದ್ಯಾಲಯ, ಮೈಸೂರು ಗ್ರಾಹಕರ ಪರಿಷತ್, ಮೈಸೂರು ವಾಟರ್ ಫೋರಂ, ಮೈಸೂರು ವಾಸ್ತುಶಿಲ್ಪ ಕಾಲೇಜು ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಜಲ, ಪಕ್ಷಿ ತಜ್ಞರು, ಪರಿಸರವಾದಿಗಳು, ಪರಿಸರ ಸಂರಕ್ಷಣೆ ಕೆಲಸ ಮಾಡುತ್ತಿರುವ ತಂತ್ರಜ್ಞರು ತಮ್ಮ ವಿಚಾರವನ್ನು ಮಂಡಿಸಿದರು. ಪುರಾತನ ಪೂರ್ಣಯ್ಯ ನಾಲೆ ಉಳಿಸಿ, ಕುಕ್ಕರಹಳ್ಳಿ ಕೆರೆಯನ್ನು ಸಂರಕ್ಷಣೆ ಮಾಡಬೇಕು ಎಂದು ಒಕ್ಕೊರಲ ಆಗ್ರಹ ಮಾಡಿದರು.
ಜಲತಜ್ಞ ವಿ.ಎನ್.ರವಿ ಮಾತನಾಡಿ, 25 ಕಿ.ಮೀ. ಉದ್ದದ ಪೂರ್ಣಯ್ಯ ನಾಲೆ ಮೈಸೂರಿನ ಪ್ರಮುಖ ಜಲಮೂಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ಬಡಾವಣೆ ನಿರ್ಮಾಣಕ್ಕಾಗಿ ವಿಜಯನಗರದಲ್ಲಿ ನಾಲೆ ಜಾಗವನ್ನು ಮುಚ್ಚಿದೆ. ವಿವಿಧೆಡೆ ನಾಲೆ ಒತ್ತುವರಿ, ನಾಲೆಯ ಬಫರ್ ಜಾಗ ಅತಿಕ್ರಮಣವಾಗಿದೆ. ಹೀಗಾಗಿ, ಈ ನಾಲೆಯಿಂದ ಕುಕ್ಕರಹಳ್ಳಿ ಕೆರೆಗೆ ಬರುವ ನೀರು ಕಡಿಮೆಯಾಗಿದೆ. ಶುದ್ಧ ನೀರಿನ ಕೊರತೆಯಿಂದ ಕೆರೆಗೆ ಗಂಡಾಂತರ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಳೆ ನೀರಿನ ಪ್ರವಾಹ ನಿಯಂತ್ರಣ, ಅಂತರ್ಜಲ ಮರುಪೂರಣ, ಜೀವವೈವಿಧ್ಯತೆ ಕಾಯ್ದುಕೊಳ್ಳಲು ಈ ನಾಲೆ ಹಾಗೂ ಕೆರೆ ರಕ್ಷಣೆ ತುರ್ತು ಅಗತ್ಯವಾಗಿದೆ. ಆದ್ದರಿಂದ 25 ಕಿ.ಮೀ. ನಾಲೆಯ ಪೈಕಿ ಕೆರೆಯಿಂದ 4 ಕಿ.ಮೀ. ಉದ್ದ ನಾಲೆಯನ್ನಾದರೂ ಕಾಪಾಡಿಕೊಳ್ಳಬೇಕು. ಅದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ಈ ಕೆರೆ ಮಹಾರಾಜರ ಬಳುವಳಿ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಜವಾಬ್ದಾರಿ ಮೈಸೂರಿನ ಜನರ ಮೇಲಿದೆ ಎಂದರು.
ಪಕ್ಷಿತಜ್ಞ ಶಿವಪ್ರಸಾದ್ ಮಾತನಾಡಿ, ಕುಕ್ಕರಹಳ್ಳಿ ಕೆರೆ ಜೀವವೈವಿಧ್ಯತೆ ತಾಣ. ಪಕ್ಷಿಗಳ ಸಂತತಿಯಿಂದ ಜಾಗತಿಕಮಟ್ಟ ಭೂಪಟದಲ್ಲಿ ಮೈಸೂರು ಗುರುತಿಸಿಕೊಂಡಿದೆ. ಇವುಗಳ ಉಳಿವು ಪರಿಸರ ಸಂರಕ್ಷಣೆಯಲ್ಲಿ ಅಡಗಿದೆ. ಕೆರೆ ಉಳಿಯದಿದ್ದರೆ ಜೀವವೈವಿಧ್ಯತೆ ಇರಲ್ಲ. ಬದಲಿಗೆ ಭವಿಷ್ಯದಲ್ಲಿ ಇದೊಂದು ಪಾಳು ಉದ್ಯಾನವಾಗಿ ಮಾತ್ರ ಉಳಿದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಎನ್‌ಐಇ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಂ.ಆರ್.ಯದುಪತಿ ಪುಟ್ಟಿ ಮಾತನಾಡಿ, ಈ ಕೆರೆಯ ನೀರು ಮಲಿನಗೊಂಡಿದ್ದು, ಶುದ್ಧ, ಹೊಸ ನೀರು ಸಿಗದಿದ್ದರೆ ಕೆರೆ ಸತ್ತು ಹೋಗುವುದು ನಿಶ್ಚಿತ. ಪೂರ್ಣಯ್ಯ ನಾಲೆ ಪುನರುಜ್ಜೀವನ ಕುರಿತು ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ನಾಲೆ ಮುಚ್ಚಿರುವುದರಿಂದ ಗಂಗೋತ್ರಿ ಬಡಾವಣೆಯಲ್ಲಿ ಮಳೆಗಾಲದಲ್ಲಿ ಪ್ರವಾಹವೇ ಸೃಷ್ಟಿಯಾಗುತ್ತಿದೆ. ನಾಲೆಯ ಅಗಲ ಇದೀಗ 30 ಮೀಟರ್‌ನಿಂದ 7 ಮೀಟರ್‌ಗೆ ಇಳಿದಿದೆ. ಕೆರೆ, ನಾಲೆ ಉಳಿಯುವುದರಿಂದ ನೈಸರ್ಗಿಕ ಅಂತರ್ಜಲದ ಮರುಪೂರಣ ಆಗಲಿದೆ ಎಂದರು.
ನಿವೃತ್ತ ಇಂಜಿನಿಯರ್ ವಿಶ್ವನಾಥ ಶಂಕರಪ್ಪ ಮಾತನಾಡಿ, ಎಸ್‌ಜೆಸಿಇ ಕಾಲೇಜಿನ ಭಾಗದಲ್ಲಿ ನಾಲೆ ಮುಚ್ಚಿ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಕೆಲವೆಡೆ ಪಾರ್ಕ್ ಮಾಡಲಾಗಿದೆ. ವಿಜಯನಗರ 4ನೇ ಹಂತ, ದೀಪಾನಗರದಲ್ಲಿ ನಾಲೆ ಮೇಲೆ ಕಟ್ಟಡಗಳು ತಲೆ ಎತ್ತಿವೆ. ಇವುಗಳ ಒತ್ತುವರಿ ತೆರವಿನಿಂದ ನಾಲೆಯಲ್ಲಿ ನೈಸರ್ಗಿಕವಾಗಿ ನೀರು ಹರಿವಿಗೆ ಅವಕಾಶ ದೊರೆಯಲಿದೆ ಎಂದರು.
ಮೈಸೂರು ವಾಸ್ತುಶಿಲ್ಪ ಕಾಲೇಜಿನ ಡೀನ್ ಪ್ರೊ.ಎಸ್.ಚಂಪಾ ಮಾತನಾಡಿ, ಈ ನಾಲೆಯನ್ನು ಸಾರ್ವಜನಿಕರ ಬಳಕೆಯ ರೂಪದಲ್ಲಿ ಅಭಿವೃದ್ಧಿಪಡಿಸಬಹುದಾಗಿದೆ. ಅಂತರ್ಜಲ ವೃದ್ಧಿ, ಹಸಿರು ವಲಯ ಅಭಿವೃದ್ಧಿ, ನಾಲೆಯ ಆರಂಭಿಕ ಹಂತವಾದ ಮಾದಗಳ್ಳಿ ಕೆರೆಯನ್ನು ಪಾರಂಪರಿಕ ಕೆರೆಯಾಗಿ ಜೀರ್ಣೋದ್ಧಾರ ಮಾಡಬಹುದು. ನಾಲೆಯ ವ್ಯಾಪ್ತಿಯ ಕಟ್ಟೆಗಳು, ಹೊಂಡಗಳನ್ನು ಉದ್ಯಾನವಾಗಿ ಅಭಿವೃದ್ಧಿ ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬಹುದು ಎಂದು ಸಲಹೆ ನೀಡಿದರು.
ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ಮೈಸೂರು ಗ್ರಾಹಕ ಪರಿಷತ್ತಿನ ಕಾರ್ಯಾಧ್ಯಕ್ಷೆ ಶೋಭನಾ ಇದ್ದರು.
ಕಾನೂನಿನ ಪ್ರಕಾರ ನಾಲೆ, ಕೆರೆಗಳ ಒತ್ತುವರಿ ಅಪರಾಧ. ಆದ್ದರಿಂದ ಈ ಜಲಮೂಲಗಳ ಸಂರಕ್ಷಣೆ ಆಡಳಿತ ವ್ಯವಸ್ಥೆಯಷ್ಟೇ ಸಾರ್ವಜನಿಕ ಜವಾಬ್ದಾರಿಯೂ ಆಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ನ್ಯಾ.ಸುಭಾಷ್ ಬಿ.ಆಡಿ ಹೇಳಿದರು. ನಾಲೆ, ಕೆರೆಗಳು ಅತಿಕ್ರಮಣವಾದಾಗ ಸಾರ್ವಜನಿಕರು ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು.
ಆಡಳಿತ ವ್ಯವಸ್ಥೆ ಏನೂ ಮಾಡಲಿಲ್ಲವೆಂದು ಆಕ್ಷೇಪಿಸುವುದು ಸರಿಯಲ್ಲ. ಇಂತಹ ಅಕ್ರಮಗಳು ನಡೆದಾಗ ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳಿಗೆ ಮಾಹಿತಿ ನೀಡಿ ಇದನ್ನು ತಡೆಗಟ್ಟಬೇಕು. ಇದು ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನ ಜನರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು, ಕಾಳಜಿ ತೋರಬೇಕು ಎಂದು ಹೇಳಿದರು.
ಕುಕ್ಕರಹಳ್ಳಿ ಕೆರೆ, ನಾಲೆ ಸೇರಿದಂತೆ ಮೈಸೂರಿನ ಪರಿಸರ ಸಂರಕ್ಷಣೆಗೆ ರಾಜಮನೆತನದಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಜಲಮೂಲ, ಜೀವವೈವಿಧ್ಯತೆ ತಾಣವಾದ ಕೆರೆ ಹಾಗೂ ಅದಕ್ಕೆ ಪೂರಕವಾಗಿ ನಾಲೆಯನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆ ಉಳಿಸಿಕೊಡಬೇಕಿದೆ. ಇದು ಮೈಸೂರಿನ ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆಯಾಗಿದೆ ಎಂದರು.
ಜನರ ಉಪಯೋಗಕ್ಕೆ ಪೂರಕವಾಗಿ ಕೆರೆ, ನಾಲೆ ಸಂರಕ್ಷಣೆ ಮಾಡಬಹುದು. ಇದರಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ವಹಿಸಬಹುದಾಗಿದೆ ಎಂದರು.
ಮೊದಲು ಪರಿಸರ ಸಂರಕ್ಷಣೆ, ನಂತರ ಅಭಿವೃದ್ಧಿ. ಇಲ್ಲಿ ಅಭಿವೃದ್ಧಿಗೆ ವಿರುದ್ಧ ಪರಿಸರ ನಾಶವಾಗಬಾರದು. ಬದಲಿಗೆ ಪರಿಸರಕ್ಕೆ ಪೂರಕವಾಗಿರಬೇಕು ಎಂದರು.