ಜಿಲ್ಲೆ

ಪ್ರಗತಿಯ ಭರದಲ್ಲಿ ಪ್ರಕೃತಿ ಮರೆಯುತ್ತಿರುವ ಮಾನವ: ಎಚ್ ಎ ವೆಂಕಟೇಶ್ ವಿಷಾದ

ಮೈಸೂರು: ಪ್ರಗತಿಯ ಉತ್ತುಂಗಕ್ಕೆ ಏರುವ ಭರದಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದಿರುವ ಮಾನವ, ಸದಾ ತನ್ನೊಂದಿಗೆ ಇರುವ ಪ್ರಕೃತಿಯ ಒಡನಾಟವನ್ನೇ ಮರೆತಿದ್ದಾನೆ ಎಂದು ಶ್ರೀಯೋಗಿ ನಾರಾಯಣ ಯತೀಂದ್ರ ಪ್ರಚಾರ ಸಭಾ ಪ್ರಧಾನ ಸಂಚಾಲಕರೂ ಆದ ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
ನಗರದ ಸರಸ್ವತಿಪುರಂನಲ್ಲಿರುವ ಬಣಜಿಗ ಬಲಿಜ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀಯೋಗಿ ನಾರಾಯಣ ಯತೀಂದ್ರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಪ್ರಗತಿಯ ಉತ್ತುಂಗಕ್ಕೆ ಏರಬೇಕೆಂದು ಮುನ್ನುಗ್ಗುತ್ತಿರುವ ಮನುಷ್ಯ, ತನ್ನ ಉಳಿವಿಗೆ ಬೇಕಾದ ಪ್ರಕೃತಿಯನ್ನು ಕಡೆಗಣಿಸಿದ್ದಾನೆ. ಇದರ ಪರಿಣಾಮ ಹಾಗೂ ಮುಂದಿನ ಆಗು-ಹೋಗುಗಳನ್ನು ಜಗತ್ತಿನಲ್ಲಿ ಅನೇಕರು ಭವಿಷ್ಯ ವಾಣಿ ರೂಪದಲ್ಲಿ ಈಗಾಗಲೇ ಮಂಡಿಸಿದ್ದಾರೆ. ಆದರೂ ಮನುಷ್ಯ ಎಚ್ಚೆತ್ತುಕೊಂಡಿಲ್ಲ ಎಂದರು.
ಭಾರತದ ಭವಿಷ್ಯದ ಸ್ಥಿತಿಯನ್ನು ಕುರಿತು ಹೇಳಿರುವ ಕಾಲಜ್ಞಾನವು ಒಬ್ಬ ಪ್ರವಾದಿಯ ಪವಾಡವಾಗಿದೆ. ಪ್ರಪಂಚದ ಯಾವುದೋ ಒಂದು ಭಾಗದಲ್ಲಿ ಮುಂದೊಂದು ದಿನ ನಡೆಯಬಹುದಾದ ಘಟನೆಗಳನ್ನು ಇದ್ದ ಸ್ಥಳದಲ್ಲಿಯೇ ಕುಳಿತು ನಿರ್ದಿಷ್ಟವಾಗಿ ಹೇಳುವ ಶಕ್ತಿಯೇ ಕಾಲಜ್ಞಾನವಾಗಿದೆ. ಈ ಕಾಲಜ್ಞಾನವನ್ನು ಶ್ರೀಯೋಗಿ ನಾರಾಯಣ ಯತೀಂದ್ರರು ಕರಗತ ಮಾಡಿಕೊಂಡಿದ್ದರು. ಕೈವಾರ ತಾತಯ್ಯ ಈ ನಾಡು ಕಂಡ ಒಬ್ಬ ಅಪೂರ್ವ ಸಂತರು, ಸಮಾಜ ಸುಧಾರಕರು, ಶಾಂತ ಚಿತ್ತ, ಪ್ರೀತಿ, ಸರಳ ಬದುಕನ್ನು ಸಾರಿದ ಮಹಾ ಚೇತನರಾಗಿದ್ದರು ಎಂದು ಬಣ್ಣಿಸಿದರು.
ಅನಾದಿ ಕಾಲದಿಂದಲೂ ಕಾಲಕಾಲಕ್ಕೆ ಈ ದೇಶದಲ್ಲಿ ಹಲವಾರು ಮಹಾತ್ಮರು ಮನುಜ ಕುಲದ ಆಗು-ಹೋಗುಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಅವರಲ್ಲಿ ಕರ್ನಾಟಕದ ಶ್ರೀಯೋಗಿ ನಾರಾಯಣ ಯತೀಂದ್ರರು ಪ್ರಮುಖರು ಎಂದರು.
ಸಂಘದ ಅಧ್ಯಕ್ಷ ಎಂ.ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ , ಖಜಾಂಚಿ ಪಾಂಡವಪುರ ಕೆ.ಚಂದ್ರಶೇಖರ್, ನಿರ್ದೇಶಕರಾದ ಬಿ.ಕೆ.ಸುರೇಶ್, ಹೇಮಂತಕುಮಾರ್, ಚನ್ನಕೇಶವ, ಪಾರ್ಥ ಸಾರಥಿ, ಎಚ್.ಆರ್.ವೆಂಕಟೇಶ್, ನಿಲಯಪಾಲಕ ರಘುಶೆಟ್ಟಿ ಇತರರಿದ್ದರು.