ಜಿಲ್ಲೆ

ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಲ್ಪಿಸುವಂತೆ ಒತ್ತಾಯ

ಬೆಟ್ಟದಪುರ: ಐದಾರು ದಿನಗಳಿಂದ ಅಡಗೂರು, ಕಂಭೀಪುರ ಹಾಗೂ ಚಪ್ಪರದಹಳ್ಳಿ ವ್ಯಾಪ್ತಿಯ ರೈತರ ಜಮೀನುಗಳ ಪಂಪ್‌ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದ ಹಿನ್ನೆಲೆಯಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಕಣಗಾಲು ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಸರ್ಕಾರದ ನಿಯಮಾನುಸಾರ ದಿನಕ್ಕೆ ಏಳು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು. ಆದರೆ, ಅಡಗೂರು, ಕಂಬಿಪುರ ಹಾಗೂ ಚಪ್ಪರದಹಳ್ಳಿ ವ್ಯಾಪ್ತಿಯಲ್ಲಿ ಮೂರು ಗಂಟೆ ಮಾತ್ರ ವಿದ್ಯುತ್ ಕಲ್ಪಿಸಲಾಗುತ್ತಿದೆ. ಇದರಿಂದ ಜಮೀನಿನಲ್ಲಿ ಬೆಳೆದ ಬೆಳೆಗಳು ಒಣಗುತ್ತಿವೆ. ಸಂಬಂಧಪಟ್ಟವರು ಗಮನಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಪಿಟಿಸಿಎಲ್ ಕಣಗಾಲು ವಿತರಣಾ ಕೇಂದ್ರದ ಜೆಇ ಮಹೇಶ್ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಅಡಗೂರು, ಕಂಬಿಪುರ ಹಾಗೂ ಚಪ್ಪರದಹಳ್ಳಿ ಭಾಗದ ರೈತರಾದ ಸುರೇಶ್, ಪ್ರದೀಪ್, ಅಪ್ಪುಗೌಡ, ದಿನೇಶ್, ಹರೀಶ್, ಬಾಲಕೃಷ್ಣ ಇತರರು ಇದ್ದರು.