ಹರಿಹರ: ಗ್ರಂಥಾಲಯ, ವಿಜ್ಞಾನ, ಮಾಹಿತಿ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಎಸ್.ಆರ್.ರಂಗನಾಥನ್ ಅವರ ಕೊಡುಗೆಗಳು ಭಾರತಕ್ಕಷ್ಟೇ ಅಲ್ಲದೆ ಜಾಗತಿಕವಾಗಿಯೂ ಸಾಕಷ್ಟು ಸುಧಾರಣೆ ತಂದವು ಎಂದು ಗ್ರಂಥಾಲಯದ ಪ್ರಭಾರಿ ಧಾರಕ ರವಿಕುಮಾರ್ ಹೇಳಿದರು.
ಶನಿವಾರ ಇಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬನಾರಸ್ ಹಿಂದೂ ಹಾಗೂ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಗ್ರಂಥಪಾಲಕರಾಗಿ, ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರಾಗಿ, ಭಾರತೀಯ ಗ್ರಂಥಾಲಯ ನಿರ್ದೇಶಕರಾಗಿ, ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷರಾಗಿ, ಮಾಹಿತಿ ಮತ್ತು ದಾಖಲೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಗೌರವ ಸದಸ್ಯರಾಗಿ, ಗ್ರೇಟ್ ಬ್ರಿಟನ್ ಲೈಬ್ರರಿ ಅಸೋಸಿಯೇಷನ್‌ನ ಜೀವನ ಪರ್ಯಂತ ಉಪಾಧ್ಯಕ್ಷರಾಗಿ ಸಲ್ಲಿಸಿದ ಸೇವೆ ಇತಿಹಾಸವಾಗಿದೆ ಎಂದರು.
ಇವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುವಾಗ ದಿನಕ್ಕೆ 13 ಗಂಟೆಗಳಂತೆ ವಾರದ ರಜೆ ಪಡೆಯದೆ 20 ವರ್ಷ ಸೇವೆ ಸಲ್ಲಿಸಿದರು. ಇವರು ಮದುವೆಯಾದ ದಿನದಂದು ಮಧ್ಯಾಹ್ನಕ್ಕೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಹೀಗಾಗಿ ಅವರು ಶ್ರಮಿಕ (ವರ್ಕೋಹಾಲಿಕ್) ಜೀವಿ ಎಂದು ಹೆಸರು ಪಡೆದರು ಎಂದರು.
1962ರಲ್ಲಿ ಬೆಂಗಳೂರಿನ ಭಾರತೀಯ ಅಂಕಿ, ಅಂಶ ಸಂಸ್ಥೆಯಲ್ಲಿ ಡಾಕ್ಯುಮೆಂಟೇಷನ್ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ವಿಭಾಗ ಮತ್ತು ಸಂಶೋಧನಾ ಕೇಂದ್ರವಾಗಿ ಪರಿವರ್ತನೆ ಮಾಡಿದ್ದು ರಂಗನಾಥನ್ ಅವರ ಸಾಧನೆಯಾಗಿದೆ ಎಂದರು.
ಜನಸಾಮಾನ್ಯರಿಗೂ ಗ್ರಂಥಾಲಯಗಳಲ್ಲಿ ಮುಕ್ತ ಪ್ರವೇಶ ನೀಡುವ ಮೂಲಕ ಮಾಹಿತಿ, ಶಿಕ್ಷಣವನ್ನು ಜನಸಾಮಾನ್ಯರಿಗೆ ತಲುಪಿಸಿ, ವಿವಿಧ ವಿಷಯಗಳ ಕುರಿತು ಸಾರ್ವಜನಿಕ ಸಂವಾದಕ್ಕೆ ಅವರು ದಾರಿ ಮಾಡಿಕೊಟ್ಟರು. ಈ ಎಲ್ಲ ಕೊಡುಗೆಗಳಿಗಾಗಿಯೇ ರಂಗನಾಥನ್ ಅವರಿಗೆ ಭಾರತ ಸರ್ಕಾರ 1957 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ಸಾರ್ವಜನಿಕರಲ್ಲಿ ಗ್ರಂಥಗಳ ಹಾಗೂ ಗ್ರಂಥಾಲಯಗಳ ಬಗ್ಗೆ ಆಸಕ್ತಿ ಮೂಡಿಸಲು ಈ ಗ್ರಂಥಾಲಯದಲ್ಲಿ ನೂತನ ಪಠ್ಯ ಪುಸ್ತಕ, ಪರಾಮರ್ಶನ ಮತ್ತು ವಿವಿಧ ಸ್ಪರ್ಧಾತ್ಮಕ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದರು.
ಇದೆ ಸಂದರ್ಭದಲ್ಲಿ ಡಿಜಿಟಲ್ ಗ್ರಂಥಾಲಯದ ಆ್ಯಪ್‌ನ ಬಿತ್ತಿ ಪತ್ರ ಪ್ರದರ್ಶಿಸಲಾಯಿತು.
ಗ್ರಂಥಾಲಯ ಸಹಾಯಕರಾದ ಎಚ್.ಎನ್. ಶೋಭಾ, ಎಸ್.ಎಚ್.ಹಿರೇಮಠ, ಬೆಳ್ಳೂಡಿಯ ಅಲೆಮಾರಿ ಗ್ರಂಥಾಲಯದ ಸಹಾಯಕ ರಮೇಶ್ ಬೆಳ್ಳೂಡಿ ಮತ್ತು ಗ್ರಂಥಾಲಯದ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.