ವಾದಿರಾಜ ವ್ಯಾಸಮುದ್ರ ಕಲಬುರಗಿ
ಹೊಸ ಪದಾಧಿಕಾರಿಗಳ ನೇಮಕದಲ್ಲಿಯೂ ಭಾರತೀಯ ಜನತಾ ಪಕ್ಷ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ನಿರ್ಲಕ್ಷಿಸುವ ಮೂಲಕ ಬಲವಾದ ಬರೆ ಎಳೆದಿದೆ.
ಆರು ಜಿಲ್ಲೆಗಳ ಪೈಕಿ ಕೇವಲ ಬೀದರ್ ಜಿಲ್ಲೆಯ ಪ್ರಭು ಚವ್ಹಾಣರನ್ನು ಮಾತ್ರ ಮಂತ್ರಿಯನ್ನಾಗಿ ಮಾಡಿದ ಬಿಜೆಪಿ ಕಲಬುರಗಿ,
ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಕಡೆಗಣಿಸಿದೆ. ಪದಾಧಿಕಾರಿಗಳ ನೇಮಕದಲ್ಲೂ ತನ್ನ ಕುಟಿಲ ನೀತಿಯನ್ನು ಕಟಿಲ್ ಮುಂದುವರಿಸಿ ಈ ಭಾಗದ ಕಣ್ಣಿಗೆ ಸುಣ್ಣ ಹಚ್ಚಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಕಲ್ಯಾಣ ಕರ್ನಾಟಕದ ಎಲ್ಲ ಆರು ಜಿಲ್ಲೆಗಳ ಮತದಾರರ ಮತಗಳು ಬೇಕು, ಬಿಜೆಪಿ ಗೆಲ್ಲಿಸುವುದು ನಿಮ್ಮ ಕರ್ತವ್ಯ. ಆದರೆ ಹಕ್ಕು ಚಲಾಯಿಸುವುದು ನಮ್ಮ ಕರ್ತವ್ಯ ಎನ್ನುತ್ತಾರೆ ವರಿಷ್ಠರು.
ತಮ್ಮ ಪಕ್ಷದ ಸರ್ಕಾರಕ್ಕೆ ಕಾರಣರಾದರು ಎನ್ನುವ ಕಾರಣವನ್ನೇ ಮುಂದು ಮಾಡಿ ಅನ್ಯ ಪಕ್ಷಗಳಿಂದ ಬಂದವರಿಗೆ ಮಂತ್ರಿ ಸ್ಥಾನ ನೀಡಿ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಲಾಯಿತು. ಈ ಮಧ್ಯೆ ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಾದರೂ ಒಳ್ಳೆಯ ಸ್ಥಾನ ಮಾನ ಸಿಗಬಹುದೆಂದು ಇದ್ದ ನಿರೀಕ್ಷೆ ಸುಳ್ಳಾಗಿದೆ.
ನಳಿನ್ ಕುಮಾರ ಕಟೀಲ್ ಅವರು ಪ್ರಕಟಿಸಿರುವ ಪದಾಧಿಕಾರಿಗಳ ಪಟ್ಟಿಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಕೊಪ್ಪಳದ ಹೇಮಲತಾ ನಾಯಕ್ ಅವರನ್ನು ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಹಿಂದುಳಿದ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿಯವರನ್ನು ಮತ್ತು ಎಸ್ಟಿ ಮೊರ್ಚಾಕ್ಕೆ ತಿಪ್ಪರಾಜು ಹವಾಲ್ದಾರರನ್ನು ನೇಮಿಸಿದ್ದು ಬಿಟ್ಟಿರೆ ಬೀದರ್, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಒಂದೇ ಒಂದು ಸ್ಥಾನ ನೀಡಿಲ್ಲ. ದೊಡ್ಡ ಜಿಲ್ಲೆ ಕಲಬುರಗಿಗೆ ಒಂದೇ ಸ್ಥಾನ ನೀಡಲಾಗಿದೆ. ಇದೇ ಸ್ಥಿತಿ ಕೊಪ್ಪಳ ಜಿಲ್ಲೆಗೂ ಆಗಿದೆ. ಇದ್ದದ್ದರಲ್ಲಿ ರಾಯಚೂರು ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಇತ್ತೀಚೆಗೆ ಕೆಲವು ನಿಗಮ -ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟವರಿಗೆ ಬಲವಾದ ಬರೆ ಎಳೆದಿದ್ದಾರೆ. ಹೀಗಾಗಿ ಅವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗಿದೆ. ಹೀಗಿರುವಾಗ ಪದಾಧಿಕಾರಿಗಳ ಪಟ್ಟಿಯಲ್ಲಿಯಾದರೂ ಸಮತೋಲನ ಕಾಪಾಡಬೇಕಾಗಿತ್ತು. ಅದೂ ಆಗಿಲ್ಲ ಹೀಗಾಗಿ ಬಿಜೆಪಿಯನ್ನು ನಂಬುವುದಾದರೂ ಹೇಗೆ ಎಂಬ ಪ್ರಶ್ನೆ ಕಲ್ಯಾಣ ಕರ್ನಾಟಕದ ಜನರದ್ದಾಗಿದೆ.
ಕಾಂಗ್ರೆಸ್, ಜೆಡಿಎಸ್ಗಳ ಆದ್ಯತೆ
ಹಿಂದೆ ಕಾಂಗ್ರೆಸ್, ಜನತಾ ದಳ ಮತ್ತು ಜೆಡಿಎಸ್ ಸರ್ಕಾರಗಳು ಇದ್ದಾಗ ಕಲ್ಯಾಣ ಕರ್ನಾಟಕಕ್ಕೆ ಮಂತ್ರಿ ಸ್ಥಾನ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆಗೆ ಒಂದು ಇಲ್ಲವೇ ಎರಡು ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತಿದ್ದವು. ಕಳೆದ ಸಲ ಕಾಂಗ್ರೆಸ್ ಜೆಡಿಎಸ್ಗಳ ಸರ್ಕಾರ ಇದ್ದಾಗ ಬೀದರ್ ಜಿಲ್ಲೆಯ ಎಲ್ಲ ಶಾಸಕರಿಗೂ ಒಂದಿಲ್ಲೊಂದು ಸ್ಥಾನ ನೀಡಲಾಗಿತ್ತು. ಕಲಬುರಗಿ ಜಿಲ್ಲೆಯಿಂದ ಪ್ರಿಯಾಂಕ್ ಖರ್ಗೆಯವರನ್ನು ಮಂತ್ರಿ ಮಾಡಲಾಗಿತ್ತು. ರಾಯಚೂರು ಜಿಲ್ಲೆಯಿಂದ ವೆಂಕಟರಾವ್ ನಾಡಗೌಡರನ್ನು ಸಚಿವರನ್ನಾಗಿ ನೇಮಿಸಲಾಗಿತ್ತು. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೂ ಆದ್ಯತೆ ನೀಡಲಾಗಿತ್ತು.