ಜಿಲ್ಲೆ

ಪದವೀಧರ ಕ್ಷೇತ್ರದ ಚುನಾವಣೆ, ಹಿಂದಿನ ಮತದಾರರನ್ನು ಪರಿಗಣಿಸಿ

ಕಲಬುರಗಿ: ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಈ ಹಿಂದೆ ಮತದಾನ ಮಾಡಿದವರ ಹೆಸರನ್ನು ಮುಂದುವರಿಸಿ ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ಸಮಿತಿ ಅಧ್ಯಕ್ಷ ರಾಜಶೇಖರ ಡೊಂಗರಗಾಂವ್ ಒತ್ತಾಯಿಸಿದರು.

ಕಳೆದ ಹಲವು ವರ್ಷಗಳಿಂದ ಮತದಾನ ಮಾಡಿದವರು ಈ ಬಾರಿಯ ಚುನಾವಣೆಯಲ್ಲೂ ವೋಟ್ ಮಾಡುವುದಕ್ಕೆ ಅರ್ಹ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಬೇಕು. ಕಳೆದ ೪೦-೫೦ ವರ್ಷಗಳ ಹಿಂದೆ ಪದವಿ ಪಡೆದವರಿಗೆ ದಾಖಲೆ ಸಿಗುವುದು ಕಷ್ಟವಾಗಬಹುದು. ಆದ್ದರಿಂದ ಕಳೆದ ಬಾರಿ ಎಲ್ಲ ದಾಖಲೆ ನೀಡಿ ಮತದಾನ ಮಾಡಿದ್ದಾರೆ. ಅಂತವರ ಹೆಸರು ಈ ಬಾರಿ ಪರಿಷ್ಕರಣೆ ಮಾಡಿ ಮುಂದುವರಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪದವಿ ಪಡೆದ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ನೌಕರರು, ಅರೆ ಸರ್ಕಾರಿ ನೌಕರರು, ವಕೀಲರ ಸಂಘ, ವೈದ್ಯರ ಸಂಘ ಸೇರಿ ನಾನಾ ಪದವೀಧರರ ಸಂಘಗಳ ಸದಸ್ಯರಿಗೆ ಕಡ್ಡಾಯ ನೋಂದಣಿ ಮಾಡುವಂತೆ ಚುನಾವಣಾ ಆಯೋಗ ಆದೇಶ ನೀಡಬೇಕು. ಇದರಿಂದ ನೋಂದಣಿ ಸಂಖ್ಯೆ ಹೆಚ್ಚಾಗಲಿದೆ ಎಂದರು. ಸಮಿತಿ ಗೌರವಾಧ್ಯಕ್ಷ ವಿಜಯಕುಮಾರ ಚಿಮಕೋಡೆ, ಕಾರ್ಯದರ್ಶಿ ಅಂಬಾರಾವ ಲಗಶೆಟ್ಟಿ, ಪ್ರಮುಖರಾದ ಕೆ.ಕೆ.ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.