ಚಿಕ್ಕಮಗಳೂರು: ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಗೆ ಕನಿಷ್ಠ ಮೂರು ವರ್ಷಗಳ ಕಾಲ ಅವಕಾಶ ಕಲ್ಪಿಸುವಂತೆ ವಿವಿಧ ಕನ್ನಡಪರ ಸಂಘಟನೆಗಳು ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಿವೆ. ಅಪರ ಜಿಲ್ಲಾಧಿಕಾರಿ ರೂಪ ಅವರನ್ನು ಶುಕ್ರವಾರ ಭೇಟಿ ಮಾಡಿದ ಸಂಘಟನೆಗಳ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ, ಹಿಂದೆ ಇದ್ದ ಮೂರು ವರ್ಷಗಳ ಪದವಿ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ ಎರಡು ವರ್ಷ ಅವಕಾಶವಿತ್ತು. ಅದರಿಂದಾಗಿ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ, ಆಲೋಚನಾ ಶಕ್ತಿ, ತಾರ್ಕಿಕ ಶಕ್ತಿ, ಮಾತೃಭಾಷೆಯ ಬಗ್ಗೆ ಆಳವಾದ ಜ್ಞಾನ ಬೆಳೆಯುತ್ತಿತ್ತು ಎಂದರು.
ಮಾತೃಭಾಷೆಯ ಆಳವಾದ ಜ್ಞಾನ ಅಸಾಧ್ಯ: ಇದೀಗ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಶಿಕ್ಷಣಕ್ಕೆ ನಾಲ್ಕು ವರ್ಷಗಳನ್ನು ನಿಗದಿಪಡಿಸಲಾಗಿದ್ದು ಅದರಲ್ಲಿ ಭಾಷಾ ಶಿಕ್ಷಣಕ್ಕೆ ಕೇವಲ ಒಂದೇ ವರ್ಷವನ್ನು ಸೀಮಿತಗೊಳಿಸಿರುವುದು ವಿಷಾದದ ಸಂಗತಿ. ಹೀಗಾದರೆ ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಬಗ್ಗೆ ಆಳವಾದ ಜ್ಞಾನ, ಅಭಿಮಾನ, ಸಾಹಿತ್ಯದ ಅಧ್ಯಯನ, ಕನ್ನಡದ ಸಂಸ್ಕøತಿ ಮತ್ತು ಪರಂಪರೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸರ್ಕಾರದಿಂದಲೇ ಕುತ್ತು: ಗೂಗಲ್ ಸೇರಿದಂತೆ ಅನೇಕ ಕಡೆ ಕನ್ನಡ ಭಾಷೆಗೆ ಇತ್ತೀಚಿನ ವರ್ಷಗಳಲ್ಲಿ ಅಪಮಾನ ಮತ್ತು ಕುತ್ತು ಬರುತ್ತಿದೆ. ಈಗ ಸರ್ಕಾರದಿಂದಲೇ ಕುತ್ತು ಬರುತ್ತಿರುವುದು ದುರಂತ. ನಾಲ್ಕು ವರ್ಷಗಳ ನೂತನ ಪದವಿ ಶಿಕ್ಷಣದಲ್ಲಿ ಇನ್ನಷ್ಟು ಅವಧಿಯ ಭಾಷಾ ಬೋಧನೆ ಹೆಚ್ಚಿಸುವ ಬದಲು ಒಂದು ವರ್ಷಕ್ಕೆ ಇಳಿಸಿರುವುದು ಆಘಾತಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಗೆ ಕನಿಷ್ಠ ಮೂರು ವರ್ಷಗಳ ಅವಧಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸಂಗಮ ಪ್ರತಿಷ್ಠಾನದ ಸಂಚಾಲಕ ಎಂ.ಸಿ.ಶಿವಾನಂದಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ, ನವ ಕರ್ನಾಟಕ ಯುವಶಕ್ತಿ ವೇದಿಕೆಯ ಅಧ್ಯಕ್ಷ ಸಿ.ಆರ್.ರಘು, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಶಂಕರೇಗೌಡ, ಜಿಲ್ಲಾ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಂ.ಕುಮಾರ್, ಓಂಕಾರೇಗೌಡ, ಎಲ್.ವಿ.ಕೃಷ್ಣಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಹಾಜರಿದ್ದರು.