ಹಾಸನ: ಪದವಿ ಮುಗಿದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಿಂದ ಸಾಕಷ್ಟು ಉಪಯೋಗವಾಗಲಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಂಗೇಗೌಡ ಅವರು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು, ಸ್ವಾಯತ್ತ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಮತ್ತು ಜಿಲ್ಲಾ ಉದ್ಯೋಗ ವಿನಿಂಮಯ ಕಛೇರಿ, ಮಾದರಿ ವೃತ್ತಿ ಕೇಂದ್ರ, ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೋಕಿಲಾ ಮಾತನಾಡಿ, ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ವ್ಯವಸ್ಥೆಯಲ್ಲಿಯೂ ಉದ್ಯೋಗ ಮೇಳಗಳ ಅವಶ್ಯಕತೆ ಇದೆ. ಹಾಸನ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿಯೂ ಈ ರೀತಿಯ ಕಾರ್ಯಕ್ರಮಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಇಲಾಖೆ ವತಿಯಿಂದ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ನೂತನವಾಗಿ ಆಯೋಜಿಸಲಾಗಿದೆ. ಈ ಪೋರ್ಟಲ್‌ನಲ್ಲಿ ಎಲ್ಲಾ ವಿಧದ ಕಂಪೆನಿಗಳ ಒಡನಾಟವಿರುತ್ತದೆ. ಆ ಸಂದರ್ಭದಲ್ಲಿ ಯುವಕ-ಯುವತಿಯರು ್ಲ ತಮ್ಮ ಕೆಲಸದ ಆಯ್ಕೆಯ ಕುರಿತು ಒಂದು ನಿಮಿಷದಲ್ಲಿ ವೀಡಿಯೋ ಮಾಡಿ ಅಪ್‌ಲೋಡ್ ಮಾಡಿದರೆ ಅವರಿಗೆ ಒಪ್ಪುವ ಕೆಲಸವನ್ನು ನೀಡಲಾಗುವುದು ಎಂಬ ಉದ್ದೇಶದಿಂದ ಈ ಪೋರ್ಟಲ್ ಅನ್ನು ತೆರೆಯಲಾಗಿದೆ. ಬ್ಯಾಂಕಿಂಗ್ ಮತ್ತು ವಿಭಿನ್ನ ಸರ್ಕಾರಿ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶವಿದೆ. ಅದನ್ನು ಬಳಸಿಕೊಳ್ಳುವುದರೊಂದಿಗೆ ಸಿದ್ಧತೆಯನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎಂ. ಶ್ರೀನಿವಾಸ್, ಉದ್ಯೋಗ ವಿನಿಮಯ ಕಛೇರಿಗಳಲ್ಲಿ ನಿರುದ್ಯೋಗಿಗಳಿಗೆ ಅವರ ಶೈಕ್ಷಣಿಕ ಗುಣಮಟ್ಟವನ್ನು ಮಾನದಂಡವಾಗಿಟ್ಟುಕೊಂಡು ವಿವಿಧ ಇಲಾಖೆಗಳಲ್ಲಿ ಮತ್ತು ಕಂಪೆನಿಗಳನ್ನು ಉದ್ಯೋಗವನ್ನು ನೀಡುವಂತಹ ಕೆಲಸ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಯುವಜನತೆ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಸಂಚಾಲಕರಾದ ಪವನ್ ಹೆಚ್.ಎಂ., ಗ್ರಾಮೀಣ ಉದ್ಯೋಗ ಸಂಸ್ಥೆ ವತಿಯಿಂದ 13 ವರ್ಷಗಳಿಂದ ತರಬೇತಿ ನೀಡುತ್ತಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಫಲಾಭಿನುಭವಿಗಳನ್ನು ಹೊಂದಿದೆ. ಇಲ್ಲಿ ಮುಖ್ಯವಾಗಿ ಕುರಿಸಾಕಾಣಿಕೆ, ಜೇನು ಸಾಕಾಣಿಕೆ, ಮೀನು ಸಾಕಾಣಿಕೆ, ಅಣಬೆ ಬೇಸಾಯ, ಸೇರಿದಂತೆ ಇನ್ನಿತರೆ 30 ದಿನಗಳ ತರಬೇತಿಗಳ ಕಂಪ್ಯೂಟರ್ ಕೋರ್ಸ್‌ಗಳನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರಿಗೆ ವಿಶೇಷವಾಗಿ ಬ್ಯೂಟಿಷಿಯನ್ ಕೋರ್ಸ್, ಹೊಲಿಗೆ ತರಬೇತಿ, ಪುರುಷರಿಗೆ ವೀಡಿಯೋಗ್ರಫಿ, ಫೋಟೋಗ್ರಫಿ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಪ್ರೋತ್ಸಾಹಧನವನ್ನು ಕೆನರಾ ಬ್ಯಾಂಕ್ ನೀಡುತ್ತಿದೆ ಎಂದರು.
ಶೈಕ್ಷಣಿಕ ಡೀನ್ ಡಾ. ಎಂ.ಬಿ. ಇರ್ಷಾದ್, ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿದೆ. ಪುರುಷರಿಗೆ ಉದ್ಯೋಗ ಬಹಳ ಮುಖ್ಯ ಏಕೆಂದರೆ ಕುಟುಂಬ ನಿರ್ವಹಣೆ ಮತ್ತು ಉನ್ನತ ಮಟ್ಟದ ಸಾಧನೆ ಮಾಡುವ ಸಂದರ್ಭದಲ್ಲಿ. ಉದ್ಯೋಗವು ಎಲ್ಲರಿಗೂ ಬೇಕು ಆದರೆ ಸಿದ್ಧತೆ ಮತ್ತು ತರಬೇತಿ ಪಡೆಯಲು ಸಿದ್ಧರಿರುವುದಿಲ್ಲ. ಉದ್ಯೋಗಾರ್ಹತೆ ಜೊತೆಗೆ ಕೌಶಲ್ಯವು ಬಹಳ ಮುಖ್ಯವಾಗುತ್ತದೆ. ಒಂದು ಹಂತದವರೆಗೆ ಪೋಷಕರನ್ನು ಅವಲಂಂಬಿಸಿರುತ್ತೇವೆ. ನಂತರ ಅವರಿಗೆ ನಾವೇ ಪೋಷಕರಾಗಿ ಜೀವನದ ರಥ ಎಳೆಯಬೇಕಾಗುತ್ತದೆ. ಎಲ್ಲಾ ಅರ್ಹತೆ ಹೊಂದಿದ್ದು ಕೆಲಸದಿಂದ ವಂಚಿತರಾದಾಗ ಅದು ನಿರಾಶೆಯನ್ನುಂಟು ಮಾಡುತ್ತದೆ. ಪ್ರತಿಭೆ ಎಲ್ಲರಿಗೂ ಬಹಳ ಮುಖ್ಯವಾಗುತ್ತದೆ. ಕರ್ನಾಟಕ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ವಿದ್ಯೆ, ಕೌಶಲ್ಯ, ತರಬೇತಿ ಇದರ ಜೊತೆಗೆ ಮನೋಸಂಕಲ್ಪ ಕೂಡ ಇರಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಉದ್ಯೋಗ ಅಭಿವೃದ್ಧಿ ನಿರ್ವಾಹಣಾಧಿಕಾರಿ ಗುರುಮೂರ್ತಿ ಡಿ, ಉದ್ಯೋಗದ ಅವಶ್ಯಕತೆ ಎಲ್ಲರಿಗೂ ಇರುತ್ತದೆ. ಸರ್ಕಾರದ ವತಿಯಿಂದ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಯುವಕರು ನಿರುದ್ಯೋಗದಿಂದ ಹೊರಬರಲಿ ಎಂಬ ಉದ್ದೇಶವಾಗಿದೆ. ಖಾಸಗಿ ಸಂಸ್ಥೆಗಳಿಂದ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಇಲಾಖೆಯಲ್ಲಿ ನೂತನವಾಗಿ ತರಬೇತಿ ನೀಡಲಾಗುತ್ತಿದೆ. ಸಂದರ್ಶನಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಅನುಕೂಲಕರವಾಗಿದೆ. 20 ಕ್ಕಿಂತ ಹೆಚ್ಚು ತರಬೇತಿ ಕೇಂದ್ರಗಳು ಹಾಸನ ಜಿಲ್ಲೆಯಲ್ಲಿದೆ. ಈ ರೀತಿಯ ತರಬೇತಿಯಿಂದ ನಮ್ಮ ರೆಸ್ಯೂಮ್ ಸ್ಕಿಲ್ ಡೆವಲಪ್ ಆಗುತ್ತದೆ. ತಾಂತ್ರಿಕ ಕೌಶಲ್ಯ ತರಬೇತಿಯನ್ನು ಇಲಾಖೆಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ. ಟಿ.ಪಿ. ಪುಟ್ಟರಾಜು , ಪದವಿ ಹಂತದಲ್ಲಿ ಕ್ಯಾಫಸ್ ಸೆಲೆಕ್ಷನ್ ಮಾಡುತ್ತಿರುವುದು ಶೈಕ್ಷಣಿಕ ಹಂತದಲ್ಲಿ ಉತ್ತಮ ಬೆಳವಣಿಗೆ. ಯುವಕ-ಯುವತಿಯರು ಪದವಿ ಮುಗಿಸುವ ದಿನಗಳಲ್ಲಿಂಯೇ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಉನ್ನತ ಶಿಕ್ಷಣ ಸಚಿವರು ಮತ್ತು ಸರ್ಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತ ಪ್ರೋತ್ಸಾಹಿಸುತ್ತಿದೆ. ಹಿಂದೆಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕ್ಯಾಂಪಸ್‌ಗಳನ್ನು ನಡೆಸುತ್ತಿದ್ದರು. ಆದರೆ ಇಂದು ಪದವಿ ಹಂತದಲ್ಲಿ ಈ ರೀತಿಯ ಬೆಳವಣಿಗೆ ಉತ್ತಮವಾಗಿದೆ ಎಂದು ಹೇಳಿದರು.
ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ ಮಾತನಾಡಿ, ಉದ್ಯೋಗಂ ಎಲ್ಲರ ಲಕ್ಷಣಂ ಎನ್ನುವ ಮೂಲಕ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ಉದ್ಯೋಗಾಧಿಕಾರಿ ಮಂಜುನಾಥ ಸಿ.ಬಿ. ಉಪಸ್ಥಿತರಿದ್ದು, ಯುಜಿ ವಿಭಾಗ ಉದ್ಯೋಗ ಮಾಹಿತಿ ಕೇಂದ್ರದ ಸಂಚಾಲಕರಾದ ಪ್ರೊ. ಸುನೀತಾ ಜಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ನೌಕರರಾದ ಚೇತನ್‌ಕುಮಾರ್ ಸ್ವಾಗತಿಸಿದರು. ಪಿಜಿ ವಿಭಾಗದ ಉದ್ಯೋಗ ಮಾಹಿತಿ ಕೇಂದ್ರದ ಸಂಚಾಲಕರಾದ ಡಾ. ವನಿತಾ ವಂದಿಸಿದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು, ಉದ್ಯೋಗಾಕಾಂಕ್ಷಿಗಳು, ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು, ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಹಾಜರಿದ್ದರು.