ಜಿಲ್ಲೆ

ಪದವಿ ಪರೀಕ್ಷೆ ಮುಂದೂಡಲು ಆಗ್ರಹಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪದವಿ ಪರೀಕ್ಷೆಗಳನ್ನು ಮುಂದೂಡಲು ಆಗ್ರಹಿಸಿ ವಿದ್ಯಾರ್ಥಿಗಳು ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಬಿಎ, ಬಿ.ಕಾಂ. ಬಿ.ಎಸ್‌ಸಿ, ಬಿಬಿಎ, ಬಿಸಿಎ ಸೇರಿ ವಿವಿಧ ಪದವಿ ಪರೀಕ್ಷೆಗಳು ೆ. 28ರಿಂದ ಆರಂಭವಾಗಲಿದ್ದು, ಮಾ. 7ರವರೆಗೆ ನಿಗದಿಯಾಗಿವೆ. ಆದರೆ, ಯುವ ಜನೋತ್ಸವ, ಇತರ ಕಾರಣಗಳಿಂದ ಪಠ್ಯಕ್ರಮ ಪೂರ್ಣವಾಗಿಲ್ಲ. ಹೀಗಾಗಿ ಪರೀಕ್ಷೆಯನ್ನು 10 ದಿನ ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಅಲ್ಲದೆ, ವಿಷಯಗಳ ಮಧ್ಯೆ ಬಿಡುವು ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅಹವಾಲು ಆಲಿಸಿದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರು, ಪರೀಕ್ಷಾ ವೇಳಾಪಟ್ಟಿ ಈಗಾಗಲೇ ನಿಗದಿಯಾಗಿದೆ. ಪರೀಕ್ಷೆಗಳನ್ನು ಮುಂದೂಡದೆ, ವಿಷಯಗಳ ಮಧ್ಯೆ ಕೆಲ ದಿನ ಬಿಡುವು ನೀಡಿ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.
ಗಂಗಾಧರ, ಕಾಶಿನಾಥ, ಮಂಜುನಾಥ, ರಶ್ಮಿ, ರಾಹುಲ್, ಶಿವಾನಂದ, ಬಸವರಾಜ, ಸುಧಾಕರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.