ದಾವಣಗೆರೆ: ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಿ ಮೂಲ ಸೌಕರ್ಯಗಳನ್ನು ಒದಗಿಸಿ ಪ್ರವೇಶಾತಿ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್‌ನಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು ಎಸಿಗೆ ಮನವಿ ಸಲ್ಲಿಸಿ, ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜುಗಳಲ್ಲಿ ಪ್ರಸಕ್ತ ವರ್ಷ ಪ್ರವೇಶಾತಿ ಸಂಖ್ಯೆ ಕುಸಿದಿದೆ. ಹಿಂದಿನ ಸರ್ಕಾರ ತಂದ ಹೊಸ ಶಿಕ್ಷಣ ನೀತಿ ದಿಢೀರ್ ಹೇರಿಕೆಯಿಂದಾಗಿ ಈ ಸಮಸ್ಯೆ ಉದ್ಭವಿಸಿವೆ ಎಂದು ದೂರಿದರು.
ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರವಾದ ದಾವಣಗೆರೆ ಕೂಡ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಸರ್ಕಾರಿ ಕಾಲೇಜು ಶುಲ್ಕ ಏರಿಕೆ, ಸರ್ಕಾರಿ ಸಂಸ್ಥೆಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡುತ್ತಿರುವುದು ಎನ್‌ಇಪಿಯ ಒಂದು ಭಾಗವಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಖಾತ್ರಿಪಡಿಸಿ ಪ್ರವೇಶಾತಿ ಸಂದರ್ಭದಲ್ಲಿಯೇ ಶುಲ್ಕ ವಿನಾಯಿತಿ ನೀಡಬೇಕು. ಎನ್‌ಇಪಿ 2020 ಅಪ್ರಜಾತಾಂತ್ರಿಕ ಹೇರಿಕೆಯನ್ನು ಹಿಂಪಡೆಯಬೇಕು. ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರಿ ಸಂಸ್ಥೆಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡುವ ಪ್ರಸ್ತಾವನೆ ಕೈಬಿಡಬೇಕು. ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬೇಕು ಹಾಗೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಕಚೇರಿ ಕಾರ್ಯದರ್ಶಿ ಜಿ.ಕಾವ್ಯಾ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಸ್. ಸುಮನ್, ವಿದ್ಯಾರ್ಥಿಗಳಾದ ಶಶಿಕಲಾ, ಚಂದನಾ, ಕಾವ್ಯಾ, ತನುಶ್ರೀ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
---